ಸುರತ್ಕಲ್ ವಿದ್ಯಾದಾಯಿನಿಯಲ್ಲಿ 'ಹಸಿರುಹೊನ್ನು' ಪರಿಸರ ಜಾಗೃತಿ
ಮಂಗಳೂರು, ಜೂ.25: ಪರಿಸರದ ಕುರಿತು ಜಾಗೃತಿ ನಿರಂತರವಾಗಿರಲಿ ಎನ್ನುವ ಉದ್ದೇಶದೊಂದಿಗೆ ಸುರತ್ಕಲ್ ವಿದ್ಯಾದಾಯಿನಿ ಕಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ 'ಹಸಿರುಹೊನ್ನು' ಎನ್ನುವ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸುರತ್ಕಲ್ ವಿದ್ಯಾದಾಯಿನಿ ಕಿರಿಯ ಪ್ರಾಥಮಿಕ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪಕ್ಷಿತಜ್ಞ ನಿತ್ಯಾನಂದ ಶೆಟ್ಟಿ, ಮಳೆಗಾಲದಲ್ಲಿ ಗಿಡನೆಟ್ಟು, ಬೇಸಿಗೆಯಲ್ಲಿ ಹಕ್ಕಿಗಳಿಗೆ ಆಹಾರ, ನೀರು ಒದಗಿಸಿ ಪಕ್ಷಿ ಪತಂಗಗಳನ್ನು ರಕ್ಷಿಸಬೇಕು. ಕಾಗೆಗಳ ಕಪ್ಪುಬಣ್ಣ ನೋಡಿ ಮೂದಲಿಸದಿರಿ ಎಂದರಲ್ಲದೆ, ಪಕ್ಷಿಲೋಕದ ಉಳಿವಿಗೆ ಗಿಡಮರಗಳ ರಕ್ಷಣೆ ಅತ್ಯಗತ್ಯ. ಇದನ್ನು ನಾವು ಪಾಲಿಸೋಣ ಎಂದು ನುಡಿದರು.
ಇನ್ನೋರ್ವ ತಜ್ಞೆ ರಮ್ಯಾ ಮಾತನಾಡಿ, ಪರಿಸರದ ಸಮತೋಲನಕ್ಕೆ ಪಶ್ಚಿಮ ಘಟ್ಟದ ಮಹತ್ವ ಏನೆಂಬುದನ್ನು ವಿವರಿಸಿದರು.
ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ವೆಂಕಟರಾವ್ ಅಧ್ಯಕ್ಷತೆ ವಹಿಸಿದ್ದರು. ಅಲೋಶಿಯಸ್ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಜ್ಯೋತಿ ಮಿರಾಂಡ, ಸಂಚಾಲಕಿ ಪಿ.ಸಾವಿತ್ರಿ ಉಪಸ್ಥಿತರಿದ್ದರು.
ಶಾಲಾ ಆವರಣದಲ್ಲಿ ನೇರಳೆ, ಸಪೊಟಾ, ಗುಲಾಬಿ, ಮಲ್ಲಿಗೆ, ಲೋಳೆಸರ ಗಿಡಗಳನ್ನು ನೆಡಲಾಯಿತು. ಇದೇ ವೇಳೆ ಮರಗಳಿಗೆ ಹಕ್ಕಿಗಳು ಗೂಡುಕಟ್ಟಿ ವಾಸಿಸುವಂತಹ ಮಡಿಕೆಗಳನ್ನು ಕಟ್ಟಲಾಯಿತು.
ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಯಜ್ಞೇಶ್ ಸ್ವಾಗತಿಸಿದರು. ಅಲೋಶಿಯಸ್ ಪ್ರಾಧ್ಯಾಪಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾದಾಯಿನಿ ಶಾಲೆಯ ಶಿಕ್ಷಕಿ ಶಾಂತಾ ವಂದಿಸಿದರು. ಪ್ರಾಧ್ಯಾಪಕಿ ಡಾ.ಸನಾ ಶೇಖ್ ಸಹಕರಿಸಿದರು.