ನಾಗೇಶ ವಿ.ಬೆಟ್ಟಕೋಟೆಗೆ ‘ಮುದ್ರಾಡಿ ನಾಟ್ಕ ಸಂಮಾನ’ ಪ್ರದಾನ

Update: 2018-06-25 15:08 GMT

ಹೆಬ್ರಿ, ಜೂ.25: ಕನ್ನಡ ರಂಗಭೂಮಿ ಇಂದು ಹೈಟೆಕ್ ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ನಲುಗುತ್ತಿದೆ. ಯಾರೋ ಗುತ್ತಿಗೆ ಪಡೆದು ರಂಗಪ್ರಕಾರಗಳನ್ನು ನಡೆಸುವಂತಾಗಿದೆ. ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಬೆಲೆಯೇ ಇಲ್ಲದಂತಾಗಿದೆ. ಸರಕಾರ ಗಂಭೀರವಾಗಿ ಯೋಚಿಸಿ ರಂಗಭೂಮಿಯ ಹೈಟೆಕ್ ದಲ್ಲಾಳಿಗಳಿಗೆ ಕಡಿವಾಣ ಹಾಕಲೇಬೇಕಾಗಿದೆ. ಇಲ್ಲವಾದರೆ ರಂಗಭೂಮಿಗೆ ಉಳಿಗಾಲವಿಲ್ಲ ಎಂದು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ಹಿರಿಯ ರಂಗನಿರ್ದೇಶಕ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಹೇಳಿದ್ದಾರೆ.

ಮುದ್ರಾಡಿ ನಾಟ್ಕದೂರಿನಲ್ಲಿ ನಮ ತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿಯು ನಾಟ್ಕದೂರು ಚೌಟರ ಬಯಲಿನಲ್ಲಿ ಸಂಸ್ಕೃತಿ ಇಲಾಖೆ ಹೊಸದಿಲ್ಲಿ, ಸಂಗೀತ ಮತ್ತು ನಾಟಕ ಅಕಾಡೆಮಿ ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಎಂಟು ದಿನಗಳ ಕಾಲ ಆಯೋಜಿಸಿದ್ದ ‘ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ’ದ ಸಮಾರೋಪ ಸಮಾರಂಭದಲ್ಲಿ ‘ಮುದ್ರಾಡಿ ನಾಟ್ಕ ಸಂಮಾನ-2018’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ಹಾವಳಿಯ ನಡುವೆಯೂ ರಂಗಭೂಮಿ ಬೆಳೆದು ನಮ್ಮ ಸಂಸ್ಕೃತಿ, ಮಾನವೀಯತೆಯನ್ನು ಉಳಿಸುವ ಕೆಲಸ ಮಾಡುತ್ತಿದೆ. ದೇಶವು ಅಪಾಯದ ಹಂತದಲ್ಲಿದ್ದು ದೇಶವನ್ನು ಉಳಿಸಲು ರಂಗಭೂಮಿಯಿಂದ ದೊಡ್ಡಮಟ್ಟದ ಚಳವಳಿಯೊಂದು ಆರಂಭಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅವರು ನುಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಉಡುಪಿ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಕಳದ ಮಾಜಿ ಶಾಸಕ ಎಚ್.ಗೋಾಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಮುದ್ರಾಡಿ ಆದಿಶಕ್ತಿ ಮತ್ತು ನಂದೀಕೇಶ್ವರ ದೇವಸ್ಥಾನದ ಧರ್ಮದರ್ಶಿ ಧರ್ಮಯೋಗಿ ಮೋಹನ್ ಆರ್ಶೀವಚನ ನೀಡಿದರು. ನಮತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿಯ ಅಧ್ಯಕ್ಷ ಸುಕುಮಾರ್ ಮೋಹನ್, ಸಂಘಟನಾ ಕಾರ್ಯದರ್ಶಿ ಜಗದೀಶ ಜಾಲ, ಕಾರ್ಯದರ್ಶಿ ವಾಣಿ ಸುಕುಮಾರ್, ಸುಗಂಧಿ ಉಮೇಶ ಕಲ್ಮಾಡಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News