ಪಶ್ಚಿಮ ಘಟ್ಟಗಳ ಕುರಿತ ವರದಿ:ಪರಿಷ್ಕೃತ ಶಿಫಾರಸುಗಳನ್ನು ಸಲ್ಲಿಸಿದ ಕೇರಳ

Update: 2018-06-25 15:51 GMT

ತಿರುವನಂತಪುರ,ಜೂ.25: ರಾಜ್ಯದಲ್ಲಿಯ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶಗಳ ಮರುವಿಂಗಡಣೆ ಕುರಿತು ಕೇರಳ ರಾಜ್ಯ ದೂರಸಂವೇದಿ ಮತ್ತು ಪರಿಸರ ಕೇಂದ್ರ(ಕೆಎಸ್‌ಆರ್‌ಇಸಿ)ವು ನಡೆಸಿದ ಸರ್ವೇಕ್ಷಣೆ ಮತ್ತು ಅಧ್ಯಯನಗಳನ್ನು ಆಧರಿಸಿ ತನ್ನ ಪರಿಷ್ಕೃತ ಶಿಫಾರಸುಗಳನ್ನು ಕೇರಳ ಸರಕಾರವು ಕೇಂದ್ರಕ್ಕೆ ಸಲ್ಲಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು.

ಗೋವಾ,ಗುಜರಾತ್,ಕರ್ನಾಟಕ,ಕೇರಳ,ಮಹಾರಾಷ್ಟ್ರ ಮತ್ತು ತಮಿಳುನಾಡು ಗಳಲ್ಲಿಯ ಪಶ್ಚಿಮ ಘಟ್ಟಗಳಲ್ಲಿ ಪರಿಸರ ರಕ್ಷಣೆಗೆ ಕ್ರಮಗಳನ್ನು ಸೂಚಿಸಲು ರಚಿಸಿದ್ದ ಕಸ್ತೂರಿ ರಂಗನ್ ಸಮಿತಿಯ ವರದಿಯ ಆಧಾರದಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲು ಪರಿಸರ ಸೂಕ್ಷ್ಮ ಪ್ರದೇಶಗಳ ಕುರಿತು ರಾಜ್ಯಗಳ ಅಭಿಪ್ರಾಯಗಳನ್ನು ಕೇಂದ್ರವು ಕೋರಿತ್ತು.

ಕೇರಳದಲ್ಲಿ 123 ಗ್ರಾಮಗಳ ಭಾಗಗಳು ಸೇರಿದಂತೆ ಒಟ್ಟು 13,108 ಚದರ ಕಿ.ಮೀ.ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಮರುವಿಂಗಡಿಸುವಂತೆ ಕಸ್ತೂರಿ ರಂಗನ್ ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

 ವರದಿಯ ಜಾರಿಗಾಗಿ ನಿರ್ಮಾಣ ಕಾಮಗಾರಿಗಳು ಮತ್ತು ಕಲ್ಲು ಗಣಿಗಾರಿಕೆಯ ಮೇಲೆ ಸೇರಿದಂತೆ ಹಲವಾರು ನಿರ್ಬಂಧಗಳನ್ನು ಹೇರಿ ಕೇಂದ್ರವು 2013,ನವಂಬರ್‌ನಲ್ಲಿ ಎರಡು ಆದೇಶಗಳನ್ನು ಹೊರಡಿಸಿದ ಬಳಿಕ ಕೇರಳದ ಘಟ್ಟ ಪ್ರದೇಶಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆಯು 2014,ಜನವರಿಯಲ್ಲಿ ಜನವಾಸದ,ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಕೈಬಿಡುವಂತೆ ಕೇಂದ್ರವನ್ನು ಕೋರಿ ಸರ್ವಾನುಮತದ ನಿರ್ಣಯವೊಂದನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News