×
Ad

ಈ ಹಿಂದೆ ಬಿಜೆಪಿ ಐದು ವರ್ಷ ಜಿಎಸ್‌ಟಿಯನ್ನು ವಿರೋಧಿಸಿದ್ದಾದರೂ ಯಾಕೆ: ಚಿದಂಬರಂ ಪ್ರಶ್ನೆ

Update: 2018-06-25 21:34 IST

ಹೊಸದಿಲ್ಲಿ, ಜೂ.25: ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಪ್ರಾಮಾಣಿಕತೆಯ ಆಚರಣೆ ಎಂದು ವ್ಯಾಖ್ಯಾನಿಸಿರುವ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಈ ಮಾತು ನಿಜವಾಗಿದ್ದರೆ 2014ಕ್ಕಿಂತ ಮೊದಲ ಐದು ವರ್ಷಗಳ ಕಾಲ ಬಿಜೆಪಿ ಜಿಎಸ್‌ಟಿಯನ್ನು ವಿರೋಧಿಸಿದ್ದಾದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಜಿಎಸ್‌ಟಿಯ ಅನುಷ್ಠಾನದ ನಂತರ ದೇಶದ ಲಕ್ಷಾಂತರ ವ್ಯಾಪಾರಿಗಳು ಮತ್ತು ರಫ್ತುದಾರರು ತಮ್ಮ ಹಣವನ್ನು ತಡೆಹಿಡಿಯಲಾಗಿರುವ ಮತ್ತು ಸರಿಯಾಗಿ ಪುನರ್‌ಪಾವತಿ ಮಾಡಲಾಗದ ಕಾರಣ ಸಂಕಷ್ಟಕ್ಕೀಡಾಗಿರುವುದು ಸರಕಾರಕ್ಕೆ ತಿಳಿದಿಲ್ಲವೇ ಎಂದು ಹಿರಿಯ ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ. ಜಿಎಸ್‌ಟಿಯು ಸಮಗ್ರತೆಯ ವಿಜಯ ಮತ್ತು ಪ್ರಾಮಾಣಿಕತೆಯ ಆಚರಣೆಯಾಗಿದ್ದರೆ ಐದು ವರ್ಷಗಳ ಕಾಲ ಬಿಜೆಪಿ ಅದಕ್ಕೆ ತಡೆಯೊಡ್ಡಿದ್ದಾದರೂ ಯಾಕೆ?, ಪ್ರಧಾನಿ, ವಿತ್ತ ಸಚಿವರು ಹಾಗೂ ಪ್ರಭಾರ ವಿತ್ತ ಸಚಿವರು ಜಿಎಸ್‌ಟಿಯ ಅನುಷ್ಠಾನದಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಎಂದು ಮಾಜಿ ವಿತ್ತ ಸಚಿವರು ಪ್ರಶ್ನಿಸಿದ್ದಾರೆ.

ಜಿಎಸ್‌ಟಿಯನ್ನು ಸಹಕಾರ ಸಂಯುಕ್ತ ವ್ಯವಸ್ಥೆಯ ಉತ್ತಮ ಉದಾಹರಣೆ ಎಂದು ವ್ಯಾಖ್ಯಾನಿಸಿರುವ ಪ್ರಧಾನಿ ಮೋದಿ, ನೂತನ ವ್ಯವಸ್ಥೆಯು ಪ್ರಾಮಾಣಿಕತೆಯ ಹಬ್ಬವಾಗಿದ್ದು, ದೇಶದಲ್ಲಿ ಇನ್ಸ್‌ಪೆಕ್ಟರ್ ರಾಜ್‌ಗೆ ಕೊನೆಹಾಡಿದೆ ಎಂದು ರವಿವಾರ ತಿಳಿಸಿದ್ದರು.

ಸರಕಾರವು ತಾತ್ಕಾಲಿಕ ಜಿಎಸ್‌ಟಿಆರ್-3ಬಿ ಫಾರ್ಮನ್ನು ಎಷ್ಟು ಸಮಯ ಬಳಸಬಹುದು ಎಂದು ಚಿದಂಬರಂ ಪ್ರಶ್ನಿಸಿದ್ದು ಹನ್ನೆರಡು ತಿಂಗಳು ಕಳೆದರೂ ಜಿಎಸ್‌ಟಿಆರ್-ಫಾರ್ಮ್2 ಹಾಗೂ ಜಿಎಸ್‌ಟಿಆರ್-ಫಾರ್ಮ್3ಯನ್ನು ಯಾಕೆ ಪರಿಚಯಿಸಿಲ್ಲ ಎಂದು ಕೇಳಿದ್ದಾರೆ. ಸರಕು ಹಾಗೂ ಸೇವಾ ತೆರಿಗೆಯಲ್ಲಿ ನೋಂದಾವಣೆಗೊಂಡಿರುವ ಎಲ್ಲರೂ ಜಿಎಸ್‌ಟಿಆರ್ 3ಬಿ ಫಾರ್ಮನ್ನು ತುಂಬಿಸುವುದು ಕಡ್ಡಾಯವಾಗಿದೆ. ಜಿಎಸ್‌ಟಿಆರ್ 3ಬಿ ಒಂದು ಸರಳ ತೆರಿಗೆ ಪಾವತಿ ಫಾರ್ಮ್ ಆಗಿದ್ದು ಜುಲೈ ಮತ್ತು ಆಗಸ್ಟ್ ತಿಂಗಳ ತೆರಿಗೆ ಪಾವತಿಗಾಗಿ ಅಬಕಾರಿ ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿಯಿಂದ ಪರಿಚಯಿಸಲ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News