ಮೂಡುಬಿದಿರೆಯ ಬೊಗ್ರುಗುಡ್ಡೆಯಲ್ಲಿ ಹೈಟೆಕ್ ಕೋಳಿ ಅಂಕ : ಪೊಲೀಸರಿಂದ ದಾಳಿ
ಮೂಡುಬಿದಿರೆ, ಜೂ.25 : ಇಲ್ಲಿಗೆ ಸಮೀಪದ ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಗ್ರುಗುಡ್ಡೆ ಅಡ್ಯಾರಪದವಿನಲ್ಲಿ ನಡೆಯುತ್ತಿದ್ದ ಹೈಟೆಕ್ ಕೋಳಿ ಅಂಕದ ಅಡ್ಡೆಗೆ ಮೂಡುಬಿದಿರೆ ಪೊಲೀಸರು ಸೋಮವಾರ ಮಧ್ಯಾಹ್ನ ವೇಳೆ ದಾಳಿ ನಡೆಸಿದ್ದು, ಸುಮಾರು 30ರಷ್ಟು ಕೋಳಿ, 35 ಬೈಕ್ ಸೇರಿ ಸುಮಾರು 70 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಬೊಗ್ರುಗುಡ್ಡೆ ಸಮೀಪದ ಅಡ್ಯಾರಪದವಿನಲ್ಲಿ ಚಪ್ಪರ ಮತ್ತು ಗ್ಯಾಲರಿ ನಿರ್ಮಿಸಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರ ತಂಡ ದಾಳಿ ನಡೆಸಿದೆ. ಪೊಲೀಸರು ಆಗಮಿಸುತ್ತಿದ್ದಂತೆ ಕೋಳಿ ಅಂಕ ಸ್ಥಳದಲ್ಲಿ ನೆರೆದಿದ್ದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ಸುಮಾರು 30 ಕೊಳಿ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಲಾದ ವಾಹನ ಹಾಗೂ ಕೋಳಿಗಳನ್ನು ಪೊಲೀಸ್ ಠಾಣೆಗೆ ತಂದಿದ್ದು, ಅದರ ವಾರೀಸುದಾರರು ವಾಹನಗಳನ್ನು ಬಿಡಿಸಿಕೊಳ್ಳಲು ಸಾಯಂಕಾಲದವರೆಗೆ ಪೊಲೀಸ್ ಠಾಣೆ ಹೊರಗೆ ಜಮಾಯಿಸಿರುವುದು ಕಂಡು ಬಂತು. ನಗದು ಸಹಿತ ವಿವಿಧ ಸೊತ್ತುಗಳ ಮೌಲ್ಯದ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ.