ಸಂಸ್ಕಾರಯುತ ಶಿಕ್ಷಣದಿಂದ ಸುಸಂಸ್ಕೃತ ಸಮಾಜ: ಸೋದೆ ಸ್ವಾಮೀಜಿ
ಉಡುಪಿ, ಜೂ.23: ಸೋದೆ ವಾದಿರಾಜ ಮಠ ಎಜ್ಯುಕೇಶನ್ ಟ್ರಸ್ಟ್‌ನ ಹೊಸ ಆಡಳಿತದೊಂದಿಗೆ ಆರಂಭಿಸಲಾದ 147 ವರ್ಷಗಳ ಇತಿಹಾಸ ಹೊಂದಿರುವ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಉದ್ಘಾಟನೆಯನ್ನು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸೋಮವಾರ ನೆರವೇರಿಸಿದರು.
ಲೌಕಿಕ ಶಿಕ್ಷಣದಲ್ಲಿ ಸಂಸ್ಕೃತಿ, ಸಂಸ್ಕಾರ ಇದ್ದರೆ ಮಾತ್ರ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆದು ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಕುದುರೆ ಎಂಬ ಶಿಕ್ಷಣಕ್ಕೆ ಸಂಸ್ಕೃತಿ, ಸಂಸ್ಕಾರ ಎಂಬ ಲಗಾಮು ಹಾಕದಿದ್ದರೆ ಮಕ್ಕಳು ದಾರಿ ತಪ್ಪಿ ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಸೋದೆ ಸ್ವಾಮೀಜಿ ಹೇಳಿದರು.
ನಮ್ಮ ಮಕ್ಕಳಿಗೆ ದೇಶದ ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಅಜ್ಞಾನ ಇದೆ. ಇಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದರೆ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಪಾಲಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದೆ ಭಾರತೀಯ ಸಂಸ್ಕೃತಿಯನ್ನು ನಾವು ವಿದೇಶಿಯರಿಂದ ಕಲಿಯುವ ಪರಿಸ್ಥಿತಿ ಎದುರಾಗಬಹುದು ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಜನಪ್ರತಿನಿಧಿಗಳು ಶಿಕ್ಷಣಕ್ಕೆ ಬಹಳಷ್ಟು ಆದ್ಯತೆ ನೀಡಬೇಕು. ಶಿಕ್ಷಣ ಸಂಸ್ಥೆಗಳಿಗೆ ಶಾಸಕರುಗಳೇ ಹೊರೆ ಆಗಬಾರದು. ಸಹಕಾರ ನೀಡಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಡಿಸಿಸಿ ಶಾಂತಾ ವಿ.ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ, ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಹಾಗೂ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ವಕ್ವಾಡಿ ಗುರುರಾಜ ಭಟ್ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್‌ನ ಕಾರ್ಯದರ್ಶಿ ರತ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಕಿಣಿ ಸ್ವಾಗತಿಸಿದರು. ಟ್ರಸ್ಟ್‌ನ ಕೋಶಾಧಿಕಾರಿ ಲಕ್ಷ್ಮೀನಾರಾಯಣ ಭಟ್ ವಂದಿಸಿದರು. ಡಾ.ವಿಜಯೇಂದ್ರ ಕಾರ್ಯಕ್ರಮ ನಿರೂಪಿಸಿದರು.