ಮಲ್ಪೆ ಬಂದರಿನ ಯೋಜನೆಗಳ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಸಲ್ಲಿಕೆ: ರಘುಪತಿ ಭಟ್
ಮಲ್ಪೆ, ಜೂ.25: ಮುಂಬರುವ ತಿಂಗಳಲ್ಲಿ ರಾಜ್ಯದ ಬಜೆಟ್ ಮಂಡನೆ ಯಾಗಲಿರುವುದರಿಂದ ವಾರದೊಳಗೆ ಮೀನುಗಾರ ಸಂಘದ ನೇತೃತ್ವದಲ್ಲಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಮೀನುಗಾರ ಮುಖಂಡರುಗಳ ಸಭೆ ಕರೆದು ಚರ್ಚಿಸಿ ಮಲ್ಪೆ ಬಂದರಿನಲ್ಲಿ ಆಗಬೇಕಾದ ಯೋಜನೆಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಕನ್ನಿ ಮೀನುಗಾರರ ಸಂಘದ ನೂತನ ಸಭಾಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಮೀನುಗಾರರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗಿ ಮಲ್ಪೆ ಬಂದರಿನ ಕುಂದು ಕೊರತೆ, ಬೇಡಿಕೆಗಳ ಕುರಿತು ಮನವಿ ಮಾಡಲಾಗುವುದು ಎಂದರು.
ಕಟ್ಟಡವನ್ನು ಉದ್ಘಾಟಿಸಿದ ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪಡುಕರೆಯಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ 10 ಕೋಟಿ ರೂ. ಮಂಜೂರಾಗಿದೆ. ಮಲ್ಪೆ ಮೀನು ಹರಾಜು ಪ್ರಾಂಗಣದ ಮೇಲ್ಛಾವಣಿಯನ್ನು ಬದಲಾಯಿಸಲು ಈಗಾಗಲೇ ಹಣ ತೆಗೆದಿರಿಸಲಾಗಿದ್ದು ತಾಂತ್ರಿಕ ಅನುಮೋದನೆ ದೊರೆತ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಅಧ್ಯಕ್ಷತೆಯನ್ನು ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಾಸ ಕುಂದರ್ ಕಲ್ಮಾಡಿ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಸೋಮಪ್ಪ ಕಾಂಚನ್, ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮಾಜಿ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಸಾಧು ಸಾಲ್ಯಾನ್, ರಮೇಶ್ ಕೋಟ್ಯಾನ್, ಕಿಶೋರ್ ಸುವರ್ಣ, ಯಶೋಧರ್ ಅಮೀನ್, ಗುರುದಾಸ್ ಬಂಗೇರ, ಪ್ರಶಾಂತ್ ನೇಜಾರು, ಹಸಿಮೀನು ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್, ಮೀನುಗಾರಿಕಾ ಉಪ ನಿರ್ದೇಶಕ ಪಿ.ಪಾರ್ಶ್ವನಾಥ್, ಸಹಾಯಕ ನಿರ್ದೇಶಕ ಶಿವ ಕುಮಾರ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಧನಂಜಯ ಕಾಂಚನ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ರವಿ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಚಿವರಿಗೆ ಮೀನುಗಾರಿಕೆ ಸಮಗ್ರ ಚಿತ್ರಣ
ನೂತನ ಮೀನುಗಾರಿಕಾ ಸಚಿವ ರಾಯಚೂರಿನ ನಾಡಗೌಡ ಮೀನುಗಾರಿಕೆ ಕುರಿತು ಮಾಹಿತಿ ನೀಡುವಂತೆ ನನಗೆ ಕರೆ ಮಾಡಿ ತಿಳಿಸಿದ್ದು, ಅದರಂತೆ ನಾನು ಬೆಂಗಳೂರಿನಲ್ಲಿ ಅವರಿಗೆ ಮೀನುಗಾರಿಕೆಯ ಸಮಗ್ರ ಚಿತ್ರಣವನ್ನು ನೀಡಲಿದ್ದೇನೆ. ಇದೇ ವೇಳೆ ಮೀನುಗಾರರ ಬೇಡಿಕೆ, ಕುಂದು ಕೊರೆತೆಗಳ ಬಗ್ಗೆ ಮೀನುಗಾರಿಕಾ ಸಚಿವರ ಜೊತೆ ಚರ್ಚಿಸಲಾಗುವುದು. ಅಲ್ಲದೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.