ಕೊಡವೂರು: ಗ್ರಾಮೀಣ ಕ್ರೀಡಾಕೂಟ ‘ಕೆಸರ್ಡೇರ್ ಬಿರ್ಸೆರ್’ ಸಂಪನ್ನ
ಉಡುಪಿ, ಜೂ.25: ಕೊಡವೂರು ಸುಮನಸಾ ಸಾಂಸ್ಕೃತಿಕ ಸಮಾಜ ಸೇವಾ ಸಂಘಟನೆಯು ಉಡುಪಿಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ‘ಕೆಸರ್ಡೆರ್ ಬಿರ್ಸೆರ್’ ಗ್ರಾಮೀಣ ಕ್ರೀಡಾ ಕೂಟವನ್ನು ಕೊಡವೂರು ಸಂಕದ ಬಳಿ ರವಿವಾರ ಆಯೋಜಿಸಲಾಗಿತ್ತು.
ಅನ್ನ ನೀಡುವ ಭೂಮಿಯನ್ನು ಗೌರವಿಸುವ, ರಕ್ಷಿಸುವ ಸ್ವಚ್ಛಂದತೆಯ ದ್ಯೋತಕವಾಗಿ ಗದ್ದೆಗೆ ಹಾಲೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಜನಜೀವನಕ್ಕೆ ಆಧಾರವಾಗಿದ್ದು, ಜಾನಪದ ಹಿನ್ನೆಲೆಯಿಂದ ವಿಕಸನಗೊಂಡಿರುವ ಗ್ರಾಮೀಣ ಕ್ರೀಡೆಗಳು ಮನೋರಂಜನೆ, ಆರೋಗ್ಯ, ಸಾಮಾಜಿಕ, ಸಾಂಕ ಆಶಯಗಳನ್ನು ಒಳಗೊಂಡಿರುತ್ತದೆ. ಈ ಪ್ರಕಾರಗಳಲ್ಲಿ ಒಳ್ಳೆಯ ಅನುಭವಗಳಿರುವುದರಿಂದ ಜನಜೀವನಕ್ಕೆ ಆಧಾರ ಎನಿಸಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಅಧ್ಯಕೆ ಮೀನಾಕ್ಷಿ ಮಾಧವ, ಉದ್ಯಮಿ ರಮೇಶ್ ಕುಂದರ್, ಮಲ್ಪೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಕರ್ಕೇರ, ಕೃಷಿಕ ಸದಾನಂದ ಶೇರಿಗಾರ, ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ಗಣೇಶ್ ರಾವ್ ಎಲ್ಲೂರು, ಕಾರ್ಯದರ್ಶಿ ಅಕ್ಷತ್ ಅಮೀನ್, ಕ್ರೀಡಾ ಕಾರ್ಯದರ್ಶಿ ಹರೀಶ್ ಕಲ್ಯಾಣಪುರ ಮೊದಲಾದ ವರು ಉಪಸ್ಥಿತರಿದ್ದರು.
ಹಳ್ಳಿ ಸೊಗಡಿನಲ್ಲಿ ಅತಿಥಿಗಳನ್ನು ಮುಟ್ಟಾಳೆ ಹಾಗೂ ವಾಲೆಬೆಲ್ಲ ನೀಡಿ ಸ್ವಾಗತಿಸಲಾಯಿತು. ಕೆಸರುಗದ್ದೆಗೆ ಪೂರಕವಾಗಿ 21 ವಿವಿಧ ರೀತಿಯ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ಓಟ, ಹಿಮ್ಮಖ ಓಟ, ಸಂಯಾಮಿ ಓಟ, ಗೋಣಿ ಚೀಲ ಓಟ, ಹಾಳೆ ಎಳೆಯುವುದು, ಕಪ್ಪೆ ಓಟ, ಉಪ್ಪಿನ ಮೂಟೆ, ಈಜುವುದು, ಕೆರೆದಡ, ರಿಂಗ್ ಓಟ, ಲಗೋರಿ, ಕ್ರಿಕೆಟ್, ವಾಲಿ ಬಾಲ್, ತ್ರೋಬಾಲ್, ಬೆರಿಚೆಂಡ್, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಸ್ಪರ್ಧೆಗಳಲ್ಲಿ ಸ್ಥಳೀಯರು ಭಾಗವಹಿಸಿ ಸಂಭ್ರಮಿಸಿದರು.