×
Ad

ಕೊಣಾಜೆ: ಮನೆ ಮೇಲೆ ಬಿದ್ದ ಆವರಣ ಗೋಡೆ; ಅಪಾಯದಿಂದ ಪಾರಾದ ಮನೆಮಂದಿ

Update: 2018-06-26 12:33 IST

ಕೊಣಾಜೆ, ಜೂ.26: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕೊಣಾಜೆ ದಾಸರಮೂಲೆ ಎಂಬಲ್ಲಿ ಮನೆಯ ಮೇಲೆ ಕಾಂಕ್ರಿಟ್ ಪಿಲ್ಲರಿನ ಬೃಹತ್ ಆವರಣ ಗೋಡೆ ಕುಸಿದು ಬಿದ್ದ ಘಟನೆ ತಡರಾತ್ರಿ ಸಂಭವಿಸಿದೆ.

 ಘಟನೆ ಮಧ್ಯರಾತ್ರಿ ಸುಮಾರು‌ ಒಂದು ಗಂಟೆಯ ವೇಳೆ ಸಂಭವಿಸಿದ್ದು, ಈ ವೇಳೆ ಮನೆಯೊಳಗಿದ್ದ ಆರು‌ ಮಂದಿ ಅಪಾಯದಿಂದ ಪಾರಾಗಿದ್ದಾರೆ.  ದಾಸರಮೂಲೆಯ ನಿರ್ಮಲಾ ಎಂಬವರ ಮನೆಯ ಮೇಲೆ ಆವರಣ ಗೋಡೆ ಬಿದ್ದು ಹಾನಿ ಸಂಭವಿಸಿದೆ. ಇದರಿಂದ ಮನೆಯ ಒಂದು ಪಾರ್ಶ್ವಕ್ಕೆ ಹಾನಿ ಉಂಟಾಗಿದೆ. ಮನೆಯ ಛಾವಣಿ ಕುಸಿದಿದ್ದು, ಗೋಡೆ ಬಿರುಕುಬಿಟ್ಟಿದೆ.

ಘಟನೆಯ ವೇಳೆ ನಿರ್ಮಲಾ ಹಾಗೂ ಅವರ ಮಕ್ಕಳಾದ ವಿದ್ಯಾ, ರಮೇಶ್ ಹಾಗೂ ಅಳಿಯ ಪುಟ್ನಂಜ ಹಾಗೂ ಮೊಮ್ಮಕ್ಕಳು ಸೇರಿ ಒಟ್ಟು ಆರು ಮಂದಿ ಮನೆಯೊಳಗೆ ಮಲಗಿದ್ದರು. ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ನಿರ್ಮಲಾರ ಮನೆ ಪಕ್ಕದ ಎತ್ತರ ಪ್ರದೇಶದಲ್ಲಿರುವ ದೇವಣ್ಣ ಶೆಟ್ಟಿ ಎಂಬವರ ಮನೆಯ ಆವರಣ ಗೋಡೆ ಭಾರೀ ಸದ್ದಿನೊಂದಿಗೆ ಕುಸಿದಿದೆ. ಇದು ಬೀಳುತ್ತಿರುವ ಸದ್ದು ಕೇಳಿ ಮನೆ ಮಂದಿ ಮನೆಯೊಳಗಿಂದ ಹೊರಗೋಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವಣ್ಣ ಶೆಟ್ಟಿ ಕಳೆದ ಕೆಲವು ವರ್ಷಗಳ ಹಿಂದೆ ಕಾಂಕ್ರಿಟ್ ಪಿಲ್ಲರ್ ಹಾಕಿ ಬೃಹತ್ ಆವರಣ ಗೋಡೆ ನಿರ್ಮಿಸಿದ್ದರು. ಭಾರೀ ಮಳೆಯಿಂದಾಗಿ ಈ ಆವರಣ ಗೋಡೆ ಕುಸಿದಿದೆ. ಆವರಣಗೋಡೆ ಸಮೀಪದ ವಿದ್ಯುತ್ ಕಂಬವೂ ಬೀಳುವ ಅಪಾಯಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

 ಘಟನೆ ಸ್ಥಳಕ್ಕೆ ಕೊಣಾಜೆ ಗ್ರಾ.ಪಂ. ಗ್ರಾಮ ಲೆಕ್ಕಿಗ ಪ್ರಸಾದ್, ಪಂಚಾಯತ್ ಸದಸ್ಯ ಹರಿಶ್ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News