×
Ad

ಬ್ರಿಟಿಷರ ಕಾಲದ ಗುರುಪುರ ಸೇತುವೆಗೆ ಸಿಗಲಿದೆಯೇ ಮುಕ್ತಿ?

Update: 2018-06-26 17:23 IST

ಮಂಗಳೂರು, ಜೂ.26: ಬಂಟ್ವಾಳದ ಮುಲ್ಲರಪಟ್ನದ ಸೇತುವೆ ನಿನ್ನೆ ಕುಸಿತಗೊಂಡಿರುವಂತೆಯೇ ಜಿಲ್ಲೆಯ ಹಳೆಯ ಸೇತುವೆಗಳ ಸುರಕ್ಷತೆಯ ಆತಂಕ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಶಿಥಿಲಾವಸ್ಥೆಗೆ ತಲುಪಿರುವ ಗುರುಪುರ ಸೇತುವೆ ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಸೇತುವೆ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿ ಈಗಾಗಲೇ ಸ್ಥಳೀಯರಿಂದ ಹಲವು ಬಾರಿ ಪ್ರತಿಭಟನೆ, ರಸ್ತೆ ತಡೆಯೂ ನಡೆಸಲಾಗಿದೆ.

ಇದೀಗ ಮುಲ್ಲರಪಟ್ನ ಸೇತುವೆ ಕುಸಿದ ಬೆನ್ನಲ್ಲೇ ಅಪಾಯದಂಚಿನಲ್ಲಿರುವ ಗುರುಪುರ ಸೇತುವೆಯ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯ 169ರ ಮಂಗಳೂರಿನಿಂದ ಕಾರ್ಕಳವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಇದಾಗಿದೆ. ಗುರುಪುರದಲ್ಲಿ ಫಲ್ಗುಣಿ ನದಿ ಮೇಲೆ ಕಟ್ಟಲಾಗಿರುವ ಈ ಸೇತುವೆ ನಿರ್ಮಾಣವಾಗಿದ್ದು 1923ರ ಬ್ರಿಟಿಷರ ಆಡಳಿತದ ಅವಧಿಯಲ್ಲಿ. ಅಂದಿನ ಕಾಲದಲ್ಲಿ ಓಡಾಡುತ್ತಿದ್ದ ವಾಹನಗಳ ಆಧಾರದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಹಾಗಿದ್ದರೂ ಕಳೆದ 94 ವರ್ಷಗಳಿಂದ ಈ ಸೇತುವೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಭಾರೀ ವಾಹನಗಳ ಭಾರವನ್ನು ಹೊತ್ತು ಸದ್ಯ ಶಿಥಿಲಾವಸ್ಥೆಗೆ ತಲುಪಿದೆ. ಈ ಸೇತುವೆ ಇಕ್ಕಟ್ಟು ಕೂಡಾ ಆಗಿರುವುದರಿಂದ ಇಲ್ಲಿ ಬಹುತೇಕ ಸಂದರ್ಭಗಳಲ್ಲಿ ವಾಹನಗಳ ದಟ್ಟಣೆಯಿಂದ ಸವಾರರು ತಾಸುಗಟ್ಟಲೆ ಸೇತುವೆಯ ಇಕ್ಕೆಲಗಳಲ್ಲಿ ಕಾಯಬೇಕಾದ ಪರಿಸ್ಥಿತಿಯೂ ಇದೆ.

ಈ ಸೇತುವೆಯಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಶಿಥಿಲಗೊಂಡು ಅಪಾಯದಂಚಿನಲ್ಲಿರುವ ಈ ಸೇತುವೆಯಲ್ಲಿ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಸೇತುವೆಯ ಸಂರಕ್ಷಣೆಯ ಕ್ರಮ ಕೈಗೊಳ್ಳಬೇಕಿದೆ.

ಈ ಸೇತುವೆಗೆ ಅಪಾಯ ಸಂಭವಿಸಿದ್ದಲ್ಲಿ ಮಂಗಳೂರು- ಕಾರ್ಕಳ ನಡುವಿನ ಪ್ರಮುಖ ಸಂಪರ್ಕವೇ ಕಡಿದುಹೋಗಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಸೇತುವೆ ಇರುವುದರಿಂದ ಇದರಿಂದ ಲಕ್ಷಾಂತರ ಮಂದಿ ಪರದಾಬೇಕಾದ ಪರಿಸ್ಥಿತಿಯೂ ಎದುರಾಗಲಿದೆ.

ಹೆದ್ದಾರಿ ಇಲಾಖೆಯಿಂದ ಈ ಹಳೆ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಾಣಕ್ಕೆ 33 ಕೋಟಿ ರೂ.ಗಳ ಟೆಂಡರ್ ಆಗಿದೆ. ಹೊಸ ಸೇತುವೆ ಕಾಮಗಾರಿ ಆರಂಭಗೊಳ್ಳುವವರೆಗೆ ಈ ಸೇತುವೆಯ ಸುರಕ್ಷತೆಯನ್ನು ಸಂಬಂಧಪಟ್ಟವರು ಖಾತ್ರಿಪಡಿಸಿ ಸಾರ್ವಜನಿಕರ ಆಂಕವನ್ನು ದೂರ ಮಾಡಬೇಕಾಗಿದೆ.

ಗುರುಪುರ ಸೇತುವೆ ತಾತ್ಕಾಲಿಕ ರಕ್ಷಣೆ ಜವಾಬ್ಧಾರಿ ಅಧಿಕಾರಿಗಳದ್ದು: ಸಂಸದ ನಳಿನ್
ಗುರುಪುರ ಸೇತುವೆಯೂ ಅಪಾಯದಲ್ಲಿದೆ. ಅದಕ್ಕೆ ಈಗಾಗಲೇ 33 ಕೋಟಿ ರೂ.ಗಳ ಟೆಂಡರ್ ಆಗಿದೆ. ಕಾಮಗಾರಿ ಆರಂಭಲಿದೆ. ಆದರೂ ತಾತ್ಕಾಲಿಕವಾಗಿ ಅದರ ರಕ್ಷಣೆಯ ಜವಾಬ್ಧಾರಿ ಅಧಿಕಾರಿಗಳದ್ದು. ಅದನ್ನು ಎನ್‌ಐಟಿಕೆಯ ಮೂಲಕ ಪರಿಶೀಲನೆಗೆ ತಿಳಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News