ಸಿರಿಯ: ಬಂಡುಕೋರ ನಿಯಂತ್ರಣದ ದರಾ ನಗರದ ಮೇಲೆ ಬ್ಯಾರಲ್ ಬಾಂಬ್

Update: 2018-06-26 16:18 GMT

ಬೈರೂತ್, ಜೂ. 26: ಸಂಘರ್ಷಪೀಡಿತ ಸಿರಿಯದ ದರಾ ನಗರದ ಮೇಲೆ ಸರಕಾರಿ ಹೆಲಿಕಾಪ್ಟರ್‌ಗಳು ಸೋಮವಾರ ಬ್ಯಾರಲ್ ಬಾಂಬ್‌ಗಳನ್ನು ಹಾಕಿದೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಸ್ಫೋಟಕಗಳಿಂದ ತುಂಬಿರುವ ಬ್ಯಾರಲ್‌ಗಳ ಜೊತೆಗೆ ಹೆಲಿಕಾಪ್ಟರ್‌ಗಳು ನಾಗರಿಕರಿಗೆ ಎಚ್ಚರಿಕೆ ಪತ್ರಗಳನ್ನೂ ಉದುರಿಸಿವೆ. ‘‘ಸೇನೆ ಬರುತ್ತಿದೆ. ಪೂರ್ವ ಘೌತದ ನಿಮ್ಮ ಸಹೋದರರು ಮಾಡಿರುವಂತೆ ಭಯೋತ್ಪಾದಕರನ್ನು ಒದ್ದೋಡಿಸಿ’’ ಎಂಬುದಾಗಿ ಪತ್ರಗಳಲ್ಲಿ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

‘‘ನಾನು ಮತ್ತು ನನ್ನ ಹೆಂಡತಿ ಉಟ್ಟ ಬಟ್ಟೆಯಲ್ಲೇ ಹೊರಗೆ ಬಂದಿದ್ದೇವೆ. ನಮ್ಮ ಮನೆ ಸಂಪೂರ್ಣ ನಾಶವಾಗಿದೆ’’ ಎಂದು ದರಾ ನಿವಾಸಿ ಮುಹಮ್ಮದ್ ಅಬು ಖಾಸಿಮ್ ‘ರಾಯ್ಟರ್ಸ್’ಗೆ ಹೇಳಿದರು.

ನಿರಂತರ ದಾಳಿಯಿಂದಾಗಿ ದರಾದ ಈಶಾನ್ಯದಲ್ಲಿರುವ ಈ ಗ್ರಾಮವು ‘ಸಹಿಸಲಸಾಧ್ಯ ನರಕ’ದಂತಾಗಿದೆ ಎಂದು ಅವರು ಹೇಳುತ್ತಾರೆ.

ಈ ಪ್ರದೇಶವು ಇಸ್ರೇಲ್ ಮತ್ತು ಜೋರ್ಡಾನ್‌ಗೆ ಸಮೀಪವಿರುವುದರಿಂದ ಅದು ರಾಜಕೀಯ ಸೂಕ್ಷ್ಮತೆಯನ್ನು ಹೊಂದಿದೆ. ಅದೂ ಅಲ್ಲದೆ, ಅಮೆರಿಕ, ಜೋರ್ಡಾನ್ ಮತ್ತು ಸಿರಿಯದ ಮಿತ್ರ ದೇಶ ರಶ್ಯಗಳ ನಡುವೆ ಯುದ್ಧವಿರಾಮ ಒಪ್ಪಂದ ಏರ್ಪಟ್ಟಿದೆ.

ಯಾವುದೇ ಯುದ್ಧವಿರಾಮ ಉಲ್ಲಂಘನೆಯು ಪರಿಣಾಮಗಳನ್ನು ಹೊಂದಿರುತ್ತದೆ ಎಂಬುದಾಗಿ ಅಮೆರಿಕ ಈಗಾಗಲೇ ಎಚ್ಚರಿಕೆ ನೀಡಿದೆ.

ಆದರೆ, ಯಾವುದೇ ರೀತಿಯ ಅಮೆರಿಕ ಸೇನಾ ನೆರವನ್ನು ನಿರೀಕ್ಷಿಸಬಾರದು ಎಂಬುದಾಗಿ ಅಮೆರಿಕ ತಮಗೆ ತಿಳಿಸಿದೆ ಎಂದು ಬಂಡುಕೋರರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News