×
Ad

ಅಕ್ಟೋಬರ್ ಗೆ ಮೊದಲು ರಾಮಮಂದಿರ ನಿರ್ಮಾಣದ ಕಾನೂನು ಜಾರಿಯಾಗದಿದ್ದರೆ ಪ್ರತಿಭಟನೆ : ತೊಗಾಡಿಯಾ

Update: 2018-06-26 23:03 IST

ಲಕ್ನೊ, ಜೂ. 26: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ಸರಕಾರ ನಿಷ್ಕ್ರಿಯವಾಗಿದೆ ಎಂದು ದೂರಿರುವ ವಿಶ್ವ ಹಿಂದು ಪರಿಷದ್(ಎಎಚ್‌ಪಿ) ಅಧ್ಯಕ್ಷ ಪ್ರವೀಣ್ ತೊಗಾಡಿಯಾ, ಈ ವರ್ಷದ ಅಕ್ಟೋಬರ್ ಒಳಗಡೆ ರಾಮಮಂದಿರ ನಿರ್ಮಾಣದ ಬಗ್ಗೆ ಕಾನೂನು ಜಾರಿಯಾಗದಿದ್ದರೆ ಹಿಂದೂ ಸಂತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ರಾಮಮಂದಿರ ನಿರ್ಮಾಣದ ಬಗ್ಗೆ ನಿರ್ಧಿಷ್ಟ ಘಟನಾಕ್ರಮಗಳನ್ನು ಸರಕಾರ ಸಂಸತ್ತಿನಲ್ಲಿ ಘೋಷಿಸಬೇಕು. ಅಕ್ಟೋಬರ್ ಒಳಗಡೆ ಇದನ್ನು ಮಾಡದಿದ್ದರೆ ಲಕ್ನೋದಿಂದ ಅಯೋಧ್ಯೆಯವರೆಗೆ ಸಾಧು ಸಂತರ ಬೃಹತ್ ಜಾಥಾ ನಡೆಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಬಹುಮತದಿಂದ ಸರಕಾರ ರಚಿಸಿದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಈ ಭರವಸೆ ಮರೆತರೆ 2019ರಲ್ಲಿ ಬಿಜೆಪಿಗೆ ಹಿಂದೂಗಳು ಪಾಠ ಕಲಿಸುವುದು ನಿಶ್ಚಿತ ಎಂದ ಅವರು, ತಾನು 2019ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಕ್ಟೋಬರ್‌ನಲ್ಲಿ ತಿಳಿಸುತ್ತೇನೆ ಎಂದರು. ಮುಂದಿನ ಅವಧಿಯಲ್ಲಿ ಕೇಂದ್ರದಲ್ಲಿ ತೃತೀಯ ಪರ್ಯಾಯ ರಂಗದ ಸರಕಾರ ಸ್ಥಾಪನೆಯಾಗುವ ಸುಳಿವು ನೀಡಿದ ತೊಗಾಡಿಯಾ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಹಿಂದೂ ಮತಗಳನ್ನು ಅವಲಂಬಿಸಿದೆ. ಆದರೆ ಹಿಂದೂಗಳು ಈ ಎರಡೂ ಪಕ್ಷಗಳ ಮೇಲೆ ಅವಲಂಬಿತರಾಗಿಲ್ಲ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ ಜಾರಿ, ಎರಡು ಮಕ್ಕಳ ಕುಟುಂಬ ಎಂಬ ನಿಯಮ ಜಾರಿಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಬೇಡಿಕೆ ಪಟ್ಟಿ ರವಾನಿಸಲಾಗುವುದು ಎಂದರು. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಗುರುವಾಗಿರುವ ಮಹಾಂತ ಅವೈದ್ಯನಾಥ್ ಅವರು ಅಯೋಧ್ಯೆಯಲ್ಲಿ ರಾಮಮಂದಿರದ ಕನಸು ಕಂಡಿದ್ದರು. ಈಗ ಮುಖ್ಯಮಂತ್ರಿ ಆದಿತ್ಯನಾಥ್ ಈ ಕನಸನ್ನು ನನಸಾಗಿಸಬೇಕಿದೆ ಎಂದು ತೊಗಾಡಿಯಾ ಸುದ್ದಿಗೋಷ್ಟಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News