ಗಾಂಜಾ ಮಾರಾಟಕ್ಕೆ ಯತ್ನ: ಓರ್ವನ ಸೆರೆ

Update: 2018-06-26 18:13 GMT

ಉಡುಪಿ, ಜೂ.26:ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಜೂ.25ರಂದು ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಬಿಹಾರ್ ರಾಜ್ಯದ ಪ್ರಮೋದ್ ಕುಮಾರ್ ಯಾದವ್(26) ಬಂಧಿತ ಆರೋಪಿ. ಈತನ ಬಳಿಯಿದ್ದ 42ಸಾವಿರ ರೂ. ಮೌಲ್ಯದ 2.122 ಕೆ.ಜಿ. ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ನಿರ್ದೇಶನದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಸಿ.ಎಚ್.ರಾಮಚಂದ್ರ ಭಟ್, ಸಹಾಯಕ ಪೊಲೀಸ್ ಉಪನಿರೀಕ್ಷಕ ಕೇಶವ ಗೌಡ ಮತ್ತು ಸಿಬ್ಬಂದಿಯವರಾದ ಸತೀಶ್, ಕೃಷ್ಣ ಪ್ರಸಾದ್, ಪ್ರಸನ್ನ ಸಾಲ್ಯಾನ್, ನಾಗೇಶ್, ಸಂಜಯ್ ಶೆಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News