ಮುಲ್ಲರಪಟ್ನ ಸೇತುವೆ ಕುಸಿತ: ತನಿಖೆಗೆ ಸಿಪಿಎಂ ಆಗ್ರಹ

Update: 2018-06-26 18:28 GMT

ಮಂಗಳೂರು, ಜೂ.26: ಮಂಗಳೂರು ತಾಲೂಕಿನ ಕುಪ್ಪೆಪದವು ಮತ್ತು ಬಂಟ್ವಾಳವನ್ನು ಸಂಪರ್ಕಿಸುವ ಮುಲ್ಲರಪಟ್ನ ಸೇತುವೆಯ ಕುಸಿತಕ್ಕೆ ಕಾರಣ ಏನು ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯು ಆಗ್ರಹಿಸಿದೆ.

ಈ ಸೇತುವೆಯು ಬಂಟ್ವಾಳ ತಾಲೂಕಿನ ಅರಳ ಮತ್ತು ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ನಾಗರಿಕರಿಗೆ ಅತ್ತ ಬಂಟ್ವಾಳ, ಬಿಸಿರೋಡುಗಳಿಗೂ, ಇತ್ತ ಮಂಗಳೂರು ತಾಲೂಕಿನ ಎಡಪದವು ಗಂಜಿಮಠ, ಕೈಕಂಬಗಳಿಗೂ ಸಂಪರ್ಕ ನೀಡುವ ಮೂಲಕ ಮಂಗಳೂರು ಹಾಗೂ ಮೂಡಬಿದಿರೆಯನ್ನು ತಲುಪಿಸುವ ನಿಟ್ಟಿನಲ್ಲಿ ಮುಲ್ಲರಪಟ್ನ ಸೇತುವೆ ಪ್ರಧಾನ ಪಾತ್ರ ವಹಿಸುತ್ತಿತ್ತು.

ಕೇವಲ 40 ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆಯು ಕುಸಿಯಲು ಕಾಮಗಾರಿಯ ಕಳಪೆ ಮಟ್ಟ ಕಾರಣವೇ? ಈ ಸೇತುವೆಯ ಅಕ್ಕಪಕ್ಕದ ನದಿಯಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕಾರಣವೇ? ಈ ಬಗ್ಗೆ ಸರಕಾರ ಹಾಗೂ ಜಿಲ್ಲಾಡಳಿತ ಶೀಘ್ರ ತನಿಖೆ ನಡೆಸಬೇಕು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆಗ್ರಹಿಸಿದ್ದಾರೆ.

ಸೇತುವೆಯ ಕುಸಿತದಿಂದ ಸಾರ್ವಜನಿಕರಲ್ಲದೆ, ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿದೆ. ಬಂಟ್ವಾಳ, ಮಂಗಳೂರು, ಮೂಡುಬಿದಿರೆಗಳಿಗೆ ಹೋಗಬೇಕಾದ ನಾಗರಿಕರಿಗೂ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸೇತುವೆ ಪುನಃ ನಿರ್ಮಾಣವಾಗುವವರೆಗೆ ದೋಣಿ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 100 ವರ್ಷ ಪೂರೈಸುತ್ತಿರುವ ಶಿಥಿಲವಾದ ಗುರುಪುರದ ಫಲ್ಗುಣಿ ನದಿಗೆ ಅಡ್ಡವಾಗಿರುವ ಸೇತುವೆಯು ಮಂಗಳೂರು-ಕಾರ್ಕಳ ಹೆದ್ದಾರಿ ಸಂಪರ್ಕ ರಸ್ತೆಯಾಗಿದ್ದು, ಇದು ಕೂಡಾ ಕುಸಿಯುವ ಭೀತಿಯಲ್ಲಿದೆ. ಹಾಗಾಗಿ ಜಿಲ್ಲಾಡಳಿತ ಮುಂಜಾಗರೂಕತಾ ಕ್ರಮ ಜರುಗಿಸಬೇಕು ಎಂದು ವಸಂತ ಆಚಾರಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News