×
Ad

ಭಟ್ಕಳ: ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಜೂರಿಯಾದ ಹುದ್ದೆಗಳೆಲ್ಲವೂ ಖಾಲಿ ಖಾಲಿ

Update: 2018-06-27 00:12 IST

ಭಟ್ಕಳ,ಜೂ.26: ಕೃಷಿ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಗಳ ಪುನರ್ ರಚನೆಯ ನಂತರ ಭಟ್ಕಳದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಜೂರಿಯಾದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳೇ ಹೆಚ್ಚಿದ್ದು ದಿನ ನಿತ್ಯದ ಕಾರ್ಯಕ್ಕೂ ಕೂಡಾ ತೊಂದರೆ ಪಡುವಂತಹ ಪರಿಸ್ಥಿತಿ ಇದೆ. 

ಕಳೆದ ಹಲವಾರು ವರ್ಷಗಳಿಂದ ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಅಧಿಕಾರಿಗಳೇ ಬಾಗಿಲು ತೆಗೆಯುವುದು, ಸ್ವಚ್ಚ ಗೊಳಿಸಿಕೊಳ್ಳುವುದನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 
ಗ್ರಾಮೀಣ ಭಾಗದ ರೈತರು ಕೃಷಿ ಇಲಾಖೆಯ ಕಚೇರಿಗೆ ಹೋದರೆ ಸಿಬ್ಬಂದಿಗಳೇ ಇಲ್ಲದೇ ತೊಂದರೆ ಅನುಭವಿಸಬೇಕಾಗಿ ಬರುವುದು ಸಾಮಾನ್ಯವಾಗಿದೆ. ಕಳೆದ ಹಲವು ಸಮಯದಿಂದ ಇರುವ ಸಿಬ್ಬಂದಿಗಳೇ ಇಲಾಖೆಯ ಕಾರ್ಯಭಾರವನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದರೂ ಸಹ ಸರಕಾರ ಇನ್ನೂ ಕೃಷಿ ಇಲಾಖೆಯ ಕಡೆಗೆ ಕಣ್ಣು ಹಾಯಿಸಿದಂತೆ ಕಾಣುತ್ತಿಲ್ಲ. 

ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯೊಂದಿಗೆ  ಸೂಸಗಡಿಯಲ್ಲಿ ಒಂದು ಮತ್ತು ಮಾವಳ್ಳಿಯಲ್ಲಿ ಒಂದು  ರೈತ ಸಂಪರ್ಕ ಕೇಂದ್ರ ಇದೆ. ಇವುಗಳೆಲ್ಲಾ ಸೇರಿ ಮಂಜೂರಿಯಾಗಿದ್ದ ಹುದ್ದೆಗಳು 18, ಆದರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು  ಕೇವಲ 5 ಸಿಬ್ಬಂದಿಗಳಾಗಿದ್ದು, ಮಂಜೂರಿಯಾಗಿದ್ದ 13 ಸಿಬ್ಬಂದಿಗಳ ಕೊರತೆಯೊಂದಿಗೆ ಕಚೇರಿಯನ್ನು ಸರಿದೂಗಿಸಿಕೊಂಡು ಹೋಗುತ್ತಿರುವುದೇ ದೊಡ್ಡ ಸವಾಲು ಎನ್ನುವಂತಾಗಿದೆ.  

ಕಳೆದ ಕೆಲವು ವರ್ಷಗಳಿಂದ  ಇದ್ದ ಸಿಬಂದಿಗಳ ವರ್ಗಾವಣೆ, ನಿವೃತ್ತಿ ಇತ್ಯಾದಿಗಳಿಂದಾಗಿ ಇಂದು ಕೇವಲ ಓರ್ವ ಸಹಾಯಕ ಕೃಷಿ ನಿರ್ದೇಶಕರು, ಇಬ್ಬರು ಸಹಾಯಕ ಕೃಷಿ ಅಧಿಕಾರಿಗಳು, ಓರ್ವ ಅಧೀಕ್ಷಕರು, ಓರ್ವ  ದ್ವಿತೀಯ ದರ್ಜೆ ಸಹಾಯಕ ಮಾತ್ರ ಕೆಲಸ ಮಾಡುತ್ತಿದ್ದು ಕಚೇರಿಗೆ ಬರುವ ರೈತರಿಗೆ ಸಮಾಧಾನ ಮಾಡುವುದರಲ್ಲಿಯೇ ಇವರ ದೈನಂದಿನ ಕಾರ್ಯ ಮುಗಿಯುತ್ತದೆ.  

ಹಾಲಿ ಇಲಾಕೆಯಲ್ಲಿ  ನಾಲ್ಕು ಕೃಷಿ ಅಧಿಕಾರಿಗಳ ಹುದ್ದೆ, ಎರಡು ಸಹಾಯಕ  ಕೃಷಿ ಅಧಿಕಾರಿಗಳ ಹುದ್ದೆ, ಒಂದು ಪ್ರಥಮ ದರ್ಜೆ ಸಹಾಯಕರು, ಒಂದು ಟೈಪಿಸ್ಟ್ ಹುದ್ದೆ, ಒಂದು ಚಾಲಕ, ಒಂದು ದ್ವಿತೀಯ ದರ್ಜೆ ಸಹಾಯಕ ಹಾಗೂ ಮೂವರು ಗ್ರೂಪ್ ಡಿ ನೌಕರರ ಹುದ್ದೆ ಖಾಲಿ ಇದೆ. 

ಸರಕಾರ ಸದಾ ರೈತರ ಪರ ಎನ್ನುವ ಘೋಷಣೆಯನ್ನು ಹೊರಡಿಸುತ್ತಲೇ ಇರುತ್ತದೆ.  ರೈತರಿಗೆ ಸೌಲಭ್ಯ ಕೊಡುವುದರಲ್ಲಿ ನಾವು ಹಿಂದೆ ಇಲ್ಲ ಎನ್ನುವುದು ಸರಕಾರದ ಧೋರಣೆ, ಆದರೆ ರೈತರಿಗೆ ಬೇಕಾಗಿರುವ ಕೃಷಿ ಇಲಾಖೆಯಲ್ಲಿಯೇ ಖಾಲಿ ಮಾಡಿಟ್ಟು ಇನ್ನೇನು ರೈತರಿಗೆ ಸೌಲಭ್ಯ ನೀಡಬಹುದು ಎನ್ನುವುದು ಯಕ್ಷ ಪ್ರಶ್ನೆ. 

ಮಾವಳ್ಳಿ ಮತ್ತು ಸೂಸಗಡಿ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹೀಗೆ ಎಲ್ಲ ಕಡೆಗಳಲ್ಲಿಯೂ ಕೂಡಾ ಇರುವ ಸಿಬ್ಬಂದಿಗಳೇ ಒತ್ತಡದಿಂದ ಕೆಲಸ ಮಾಡಬೇಕಾಗಿರುವ ಅನಿವಾರ್ಯತೆ ಇದೆ.   

ಸರಕಾರ ತಕ್ಷಣ ರೈತರ ಕುರಿತು ಕಾಳಜಿ ವಹಿಸಿ ಸಿಬ್ಬಂದಿಗಳನ್ನು ತುಂಬಬೇಕಾಗಿದೆ. ಹಾಲಿ ಖಾಲಿ ಇರುವ ಒಂದೆರಡು ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ತುಂಬಿದ್ದರೂ ಸಹ ಅವರಿಂದ ಎಷ್ಟು ಕೆಲಸ ತೆಗೆದುಕೊಳ್ಳಲು ಸಾಧ್ಯವಾಗುವುದು. ಹೊರ ಗುತ್ತಿಗೆ ನೌಕರರಿಗೆ ಗುತ್ತಿಗೆದಾರರು ನಿಗದಿ ಮಾಡಿರುವ ಅತ್ಯಲ್ಪ ಸಂಬಳದಲ್ಲಿಯೇ ಕಾಲ ಕಳೆಯ ಬೇಕಾಗಿದ್ದು ಹೆಚ್ಚು ಒತ್ತಾಯ ಮಾಡುವಂತೆಯೂ ಇಲ್ಲ ಎನ್ನುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News