×
Ad

ಒಳಚರಂಡಿಗೆ ಮನೆ, ಕಟ್ಟಡಗಳಿಂದ ಮಳೆ ನೀರು: 15 ದಿನಗಳಲ್ಲಿ ವರದಿ ಸಿದ್ಧ- ಮೇಯರ್ ಭಾಸ್ಕರ ಮೊಯ್ಲಿ

Update: 2018-06-27 17:29 IST

ಮಂಗಳೂರು, ಜೂ.27: ಮನೆ ಹಾಗೂ ಕಟ್ಟಡಗಳವರು ಮಳೆ ನೀರನ್ನು ಒಳಚರಂಡಿಗೆ ಹಾಯಿಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. 15 ದಿನಗಳಲ್ಲಿ ಸಮೀಕ್ಷೆ ವರದಿ ಸಿಗಲಿದ್ದು, ವರದಿಯ ಅಂಕಿ ಅಂಶಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವೆುೀಯರ್ ಭಾಸ್ಕರ ಮೊಯ್ಲಿ ತಿಳಿಸಿದರು.

ಮಹಾನಗರ ಪಾಲಿಕೆಯ ಮೇಯರ್ ಕೊಠಡಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಒಳಚರಂಡಿಗೆ ಮಳೆ ನೀರನ್ನು ಹಾಯಿಸುತ್ತಿರುವುದರಿಂದ ನಗರದ ಹಲವು ಕಡೆ ಒಳಚರಂಡಿ ಕೊಳಚೆ ನೀರು ಮಳೆ ನೀರಿನೊಂದಿಗೆ ಹೊರಬಂದು ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಮನಪಾ ವತಿಯಿಂದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಸ್ಮಾರ್ಟ್ ಸಿಟಿ: 66 ಕಾಮಗಾರಿಗಳು 2022 ಮಾರ್ಚ್ ಅಂತ್ಯಕ್ಕೆ ಪೂರ್ಣ

ಸ್ಮಾರ್ಟ್ ಸಿಟಿ ಯೋಜನೆಯ ಪ್ರಸ್ತಾವನೆ (ಸ್ಮಾಟ್ ಸಿಟಿ ಪ್ರಪೋಸಲ್)ಯಲ್ಲಿ 65 ಯೋಜನೆಗಳಿದ್ದು, ಅವುಗಳನ್ನು 2022ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಭಾಸ್ಕರ್ ಮೊಯ್ಲಿ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 4 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗಿದೆ. ಕ್ಲಾಕ್ ಟವರ್, ಕಾವೂರು ದೇವಸ್ಥಾನ, ಆಕಾಶಭವನದಲ್ಲಿ ಸ್ಮಾರ್ಟ್ ಬಸ್ ತಂಗುದಾಣ, ಕ್ಲಾಕ್‌ಟವರ್‌ನಿಂದ ಎಬಿ ಶೆಟ್ಟಿ ವೃತ್ತದವರೆಗೆ ಸ್ಮಾರ್ಟ್ ರಸ್ತೆ, ನೆಲ್ಲಿಕಾಯಿ ರಸ್ತೆಯಲ್ಲಿ ಸ್ಮಾರ್ಟ್ ಒಳಚರಂಡಿ ವ್ಯವಸ್ಥೆ ಈ ಕಾಮಗಾರಿಗಳಾಗಿವೆ ಎಂದು ಮೇಯರ್ ಹೇಳಿದರು.

ಮಂಗಳೂರು ನಗರವು ಕೇಂದ್ರ ಪುರಸ್ಕೃತ ಯೋಜನೆಯಾದ ಸ್ಮಾರ್ಟ್ ಸಿಟಿ ಅಭಿಯಾನಕ್ಕಾಗಿ ಕಂಪನಿಗಳ ಕಾಯ್ದೆ ಪ್ರಕಾರ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್‌ಪಿವಿ) ಅಂದರೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಆರಂಭಗೊಂಡಿದೆ. ಎಸ್‌ಪಿವಿಯ ಆಡಳಿತ ನಿರ್ದೇಶಕರು ಹಾಗೂ ಮುಖೆಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಪಾಲಿಕೆಯ ಆಯುಕ್ತರು ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅಧ್ಯಕ್ಷರಾಗಿ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಾರ್ಯ ನಿರ್ವಹಿಸಲಿದ್ದಾರೆ. ಮಹಾನಗರ ಪಾಲಿಕೆಯ ಮಹಾಪೌರರು ಮತ್ತು ಇತರ ಮೂರು ಮಂದಿ ಪಾಲಿಕೆಯ ಸದಸ್ಯರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಎಸ್‌ಪಿಇ ಎಂಟ್ಟು 15 ಮಂದಿ ಸದಸ್ಯರಲ್ಲಿ ಕೆಯುಐಡಿಎಫ್‌ಸಿಯ ಆಡಳಿತ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ದ.ಕ. ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಸಚಿವಾಲಯದ ಪ್ರತಿನಿಧಿಯವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬಾಕಿ ಉಳಿದಂತೆ ರಾಜ್ಯ ಸರಕಾರದ ವತಿಯಿಂದ ಒಬ್ಬರು ಮತ್ತು ಮಹಾನಗರ ಪಾಲಿಕೆ ವತಿಯಿಂದ ಒಬ್ಬರು ಹಾಗೂ ಇಬ್ಬರು ಸ್ವತಂತ್ರ ನಿರ್ದೇಶಕರ ನೇಮಕವಾಗಬೇಕಿದೆ. ಈಗಾಗಲೇ ಎಸ್‌ಪಿವಿಯ ನಿರ್ದೇಶಕರ ಮಂಡಳಿಯ ಆರು ಸಭೆಗಳು ನಡೆದಿವೆ. ಎಸ್‌ಪಿವಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಒಟ್ಟು 215 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 3.87 ಕೋಟಿ ರೂ. ವೆಚ್ಚವಾಗಿದೆ ಎಂದು ಮೇಯರ್ ಮಾಹಿತಿ ನೀಡಿದರು.

ಅಮೃತ್ ಯೋಜನೆಯಡಿ ನಾಲ್ಕು ಪಾರ್ಕ್‌ಗಳ ಅಭಿವೃದ್ಧಿ

ಅಮೃತ್ ಯೋಜನೆಯಡಿ 185.52 ಕೋಟಿ ರೂ. ಅನುದಾನದಲ್ಲಿ 2 ಕೋಟಿ ರೂ.ಗಳಲ್ಲಿ ನಾಲ್ಕು ಪಾರ್ಕ್‌ಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಹೊಸಬೆಟ್ಟು, ಕುಂಜತ್ತಬೈಲು, ಕದ್ರಿ ಹಾಗೂ ಕಾಟಿಪಳ್ಳ ಪಾರ್ಕ್‌ಗಳ ಅಭಿವೃದ್ಧಿ ಕಾಮಗಾರಿ  ನೆಯಲಿದೆ ಎಂದು ಮೇಯರ್ ತಿಳಿಸಿದರು.

ಮಳೆನೀರು ಚರಂಡಿಯ ಒಂದು ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲಸದ ಆದೇಶ ನೀಡಬೇಕಾಗಿದೆ. ಒಳಚರಂಡಿಯ ನಾಲ್ಕು ಪ್ಯಾಕೇಜ್‌ಗಳಲ್ಲಿ 1 ಪ್ಯಾಕೇಜ್‌ನ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕೆಲಸದ ಆದೇಶ ನೀಡಲಾಗಿದೆ ಎಂದವರು ಹೇಳಿದರು.

ಗೋಷ್ಠಿಯಲ್ಲಿ ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜಾ, ಲತಾ ಸಾಲ್ಯಾನ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪರಿಸರ ಅಧಿಕಾರಿ ಮಧು ಹಾಗೂ ದೀಪ್ತಿ ಉಪಸ್ಥಿತರಿದ್ದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಬಸ್ ಟರ್ಮಿನಲ್
ಸ್ಮಾಟ್ ಸಿಟಿ ಪ್ರಸ್ತಾವನೆಯಲ್ಲಿ ಪಂಪ್‌ವೆಲ್ ಬಸ್ ಟರ್ಮಿನಲ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಪೆಷಲ್ ಪರ್ಪಸ್ ವೆಹಿಕಲ್ ಸಭೆಯಲ್ಲೂ ಈ ಬಗ್ಗೆ ತೀರ್ಮಾನವಾಗಿದೆ. ಈ ಬಗ್ಗೆ ಡಿಪಿಆರ್ ಸಿದ್ಧವಾಗಿ ತಾಂತ್ರಿಕ ಸಮಿತಿಗೆ ಅನುಮೋದನೆ ಕಳುಹಿಸಲಾಗಿದೆ. ಅಲ್ಲಿ ಕೆಲವೊಂದು ತಾಂತ್ರಿಕ ಸಲಹೆಗಳನ್ನು ಕೇಳಿದ್ದಾರೆ. ಬಸ್ಸು ಪ್ರವೇಶ ಮತ್ತು ನಿರ್ಗಮನಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಬಾಕ್ಸ್ ಪುಶಿಂಗ್ ಮಾದರಿಯಲ್ಲಿ ಅವಕಾಶ ಕಲ್ಪಿಸಬೇಕಾಗಿದೆ. ಇದಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಆಯುಕ್ತ ಮುಹಮ್ಮದ್ ನಝೀರ್ ಸಭೆಯಲ್ಲಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News