ಪುತ್ತೂರು : ಬೈಕ್ ಪಲ್ಟಿ; ಗಾಯಾಳು ನವ ವಿವಾಹಿತೆ ಮೃತ್ಯು
ಪುತ್ತೂರು, ಜೂ. 27: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಕಳೆದ ಶನಿವಾರ ಬೈಕೊಂದು ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ನವ ವಿವಾಹಿತೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ಕಾಂತಪ್ಪ ಗೌಡ ಅವರ ಪುತ್ರಿ, ಸುಳ್ಯ ತಾಲ್ಲೂಕಿನ ಬೆಳ್ಳಾರೆ ನೆಟ್ಟಾರು ಸಮೀಪದ ಕೊಡಿಬೈಲು ನಿವಾಸಿ ಗಿರೀಶ್ ಅವರ ಪತ್ನಿ ಸುನಂದ (36) ಮೃತರು.
ಪುತ್ತೂರಿನ ದರ್ಬೆಯಲ್ಲಿರುವ ಡೆಂಟಲ್ ಕ್ಲಿನಿಕ್ ಒಂದರಲ್ಲಿ ಸುನಂದ ಕೆಲಸ ಮಾಡುತ್ತಿದ್ದರು. ಅವರು ಕಳೆದ ಶನಿವಾರ ಬೆಳಗ್ಗೆ ಕೆಮ್ಮಾಯಿಯ ಮನೆಯಿಂದ ತನ್ನ ಸಹೋದರ ಅಶೋಕ್ ಎಂಬವರ ಜೊತೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಅಶೋಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮವಾಗಿ ಬೈಕ್ ಮುಗುಚಿ ಬಿದ್ದಿತ್ತು. ಬೈಕಿನಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಸುನಂದ ರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.