×
Ad

ಮುಲ್ಕಿ-ಬಿ.ಸಿ.ರೋಡ್-ಮೆಲ್ಕಾರ್-ತೊಕ್ಕೊಟ್ಟು ಚತುಷ್ಪಥ ರಸ್ತೆಯ ವಿಸ್ತೃತ ಯೋಜನಾ ವರದಿ ಸಿದ್ಧ

Update: 2018-06-27 20:23 IST

ಮಂಗಳೂರು, ಜೂ.27: ಕೇಂದ್ರ ಸರಕಾರದ ಭಾರತ್ ಮಾಲ್ ಯೋಜನೆಯಡಿ ರಾ.ಹೆ. 66ರ ಮುಲ್ಕಿಯಿಂದ ಗುರುಪುರ-ಕೈಕಂಬ-ಪೊಳಲಿ-ಬಿ.ಸಿ.ರೋಡ್-ಮೆಲ್ಕಾರ್-ತೊಕ್ಕೊಟ್ಟುವರೆಗೆ ಚತುಷ್ಪಥ ರಸ್ತೆಯ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ದ.ಕ.ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಅವರು ರಾಷ್ಟ್ರೀಯ ಹೆದ್ದಾರಿಯ ಸಂಚಾರದ ಒತ್ತಡ ತಗ್ಗಿಸಲು ಕೇಂದ್ರ ಸರಕಾರವು ಭಾರತ್ ಮಾಲ್ ಯೋಜನೆಯಡಿ ಹೊಸ ಪ್ರಮುಖ ರಸ್ತೆಗಳ ಅಭಿವೃದ್ಧಿ ಮೂಲಕ ಸಂಪರ್ಕ ಜೋಡಣೆಗೆ ಮುಂದಾಗಿದೆ. ಆ ಪೈಕಿ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುರುಪುರ-ಕೈಕಂಬ-ಪೊಳಲಿ-ಬಿ.ಸಿ.ರೋಡ್-ಮೆಲ್ಕಾರ್-ತೊಕ್ಕೊಟ್ಟುವರೆಗೆ ಚತುಷ್ಪಥ ರಸ್ತೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸದೆ. ಸುಮಾರು 2,800 ಕೋ.ರೂ. ವೆಚ್ಚದ ಈ ಕಾಮಗಾರಿಗೆ ಸರಕಾರದ ಅನುಮೋದನೆ ಸಿಕ್ಕಿದೊಡನೆ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವರ್ಷಾಂತ್ಯದೊಳಗೆ ಕಾಮಗಾರಿಗೆ ಚಾಲನೆ ನೀಡಲಿದ್ದು, 2021ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಹೆದ್ದಾರಿಯನ್ನು ಮೂರು ಹಂತದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ರಾಜ್ಯ ಸರಕಾರವು ಭೂ ಸ್ವಾಧೀನ ಪ್ರಕ್ರಿಯೆ ಗೆ ವೇಗದ ಚಾಲನೆ ನೀಡಿದರೆ ಕಾಮಗಾರಿ ಕೂಡ ಬಿರುಸು ಪಡೆಯಲಿದೆ ಎಂದರು.

ರಾ.ಹೆ.ಪ್ರಾಧಿಕಾರದ ಸಮಗ್ರ ಯೋಜನಾ ವರದಿ ಸಲಹೆಗಾರ ರಾಜೀವ್ ಮಾತನಾಡಿ ಹೆಜಮಾಡಿ, ತಲಪಾಡಿ, ಬ್ರಹ್ಮರಕೂಟ್ಲು ಟೋಲ್‌ಗೇಟ್ ಮೂಲಕ ದಿನಂಪ್ರತಿ ಸುಮಾರು 20ರಿಂದ 26 ಸಾವಿರ ವಾಹನಗಳು ಚಲಿಸುತ್ತಿವೆ. ಆ ಪೈಕಿ ಶೇ.20 ಅಂದರೆ 4,100ರಷ್ಟು ಟ್ರಕ್‌ಗಳು ದಿನಂಪ್ರತಿ ಚಲಿಸುತ್ತಿವೆ. ಇದರಿಂದ ಸಂಚಾರ ದಟ್ಟಣೆ ತೀವ್ರವಾಗಿರುತ್ತದೆ. ಇದು ನಗರಗಳ ಸಂಚಾರಗಳ ಮೇಲೂ ಪರಿಣಾಮ ಬೀರಲಿದೆ. ಲೋಕೋಪಯೋಗಿ ಇಲಾಖೆಯ ಮಾಹಿತಿ ಪ್ರಕಾರ ಮುಲ್ಕಿ-ಗುರುಪುರ-ಕೈಕಂಬ-ಪೊಳಲಿ-ಬಿ.ಸಿ.ರೋಡ್-ಮೆಲ್ಕಾರ್-ತೊಕ್ಕೊಟ್ಟುವರೆಗೆ ಸುಮಾರು 90 ಕಿ.ಮೀ. ಇದೆ. ಈ ಮಧ್ಯೆ ಪ್ರಸ್ತಾವಿತ ರಸ್ತೆಯು ಕಡಿತಗೊಂಡು ಸುಮಾರು 73 ಕಿ.ಮೀ. ಆಗಲಿದೆ ಎಂದರು.

ನಿಯಮಾವಳಿ ಪ್ರಕಾರ ರಾ.ಹೆ.ಯ ಇಕ್ಕಡೆಗಳಲ್ಲಿ 70 ಮೀ. ಅಗಲ ಭೂಮಿಯನ್ನು ಸ್ವಾಧೀನಪಡಿಸಬೇಕಾಗುತ್ತದೆ. ಅವುಗಳ ಸ್ವಾಧೀನದೊಂದಿಗೆ ಅಂದಾಜಿ 73 ಕಿ.ಮೀ. ರಸ್ತೆಯ ಮಧ್ಯೆ 5 ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿದೆ ಎಂದು ರಾಜೀವ್ ನುಡಿದರು.

ಷಟ್ಪಥ ರಸ್ತೆ ಕಾಮಗಾರಿ ಬಳಿಕ ಟೋಲ್‌ಗೇಟ್ ವಿಲೀನ

ರಾಷ್ಟ್ರೀಯ ಹೆದ್ದಾರಿ 66ರ ಬಿ.ಸಿ.ರೋಡ್‌ನಿಂದ ಸುರತ್ಕಲ್ ಮುಕ್ಕವರೆಗೆ ಷಟ್ಪಥ ರಸ್ತೆ ಕಾಮಗಾರಿ ಪ್ರಕ್ರಿಯೆ ಸಂಪೂರ್ಣಗೊಂಡು ಟೆಂಡರ್ ಹಂತದಲ್ಲಿದೆ. ಬಿ.ಸಿ.ರೋಡ್‌ನಿಂದ ಗುಂಡ್ಯ, ಬೆಂಗಳೂರು ತನಕ ಹೆದ್ದಾರಿ ವಿಸ್ತರಣೆ ಕಾಂಕ್ರಿಟೀಕರಣ ನಡೆಯಲಿದೆ. ಬಳಿಕ ಇಲ್ಲಿನ ಟೋಲ್ ಗೇಟ್‌ಗಳು ವಿಲೀನಗೊಳ್ಳುವ ಸಾಧ್ಯತೆಯಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.

ಸುರತ್ಕಲ್ ಟೋಲ್‌ಗೇಟ್ ಟೆಂಡರ್ ಅವಧಿ ಮುಗಿದಿಲ್ಲ. ಹಾಗಾಗಿ ಅದನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಕುಂದಾಪುರ -ತಲಪಾಡಿ ನಡುವಣ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನವಯುಗ್ ಕಂಪೆನಿಯು ಮಾಡಿದ್ದರೂ ಎರಡೂ ಕಡೆ ಟೋಲ್‌ಗೇಟ್ ಗುತ್ತಿಗೆ ನಿರ್ವಹಣೆಯೂ ಬೇರೆ ಬೇರೆಯಿದೆ ಎಂದರು.
ಈ ಸಂದರ್ಭ ಶಾಸಕರಾದ ರಾಜೇಶ್ ನಾಯ್ಕ ಉಳೆಪ್ಪಾಡಿ, ಉಮನಾಥ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News