×
Ad

ಹಳೆ ‘ಪಿಂಚಣಿ’ ಜಾರಿಗೊಳಿಸದಿದ್ದಲ್ಲಿ ಉಗ್ರ ಹೋರಾಟ: ಸರ್ಕಾರಿ ಎನ್ಪಿಎಸ್ ನೌಕರರರಿಂದ ಎಚ್ಚರಿಕೆ

Update: 2018-06-27 20:29 IST

ಪುತ್ತೂರು, ಜೂ. 27: ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರಿಗೆ ಮರಣ ಮತ್ತು ನಿವೃತ್ತಿ ಉಪದಾನವನ್ನು ಕೇಂದ್ರ ಸರ್ಕಾರದ ಮಾದರಿಯಲ್ಲೇ 2006ರ ಎಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸದಿದ್ದಲ್ಲಿ ‘ರಕ್ತಕೊಟ್ಟೇವು-ಪಿಂಚಣಿ ಬಿಡೆವು’ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಎಂ ತಿಳಿಸಿದ್ದಾರೆ.

ಅವರು ಬುಧವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎನ್‌ಪಿಎಸ್ (ಹೊಸ ಪಿಂಚಣಿ ಸ್ಕೀಂ) ನೀತಿಯನ್ನು ರದ್ದು ಪಡಿಸಿ, ಒಪಿಎಸ್ (ಹಳೆಯ ಪಿಂಚಣಿ ಸ್ಕೀಂ) ಜಾರಿಗೊಳಿಸುವ ಮೂಲಕ 2006ಕ್ಕಿಂತ ಮೊದಲು ರಾಜ್ಯ ಸರ್ಕಾರಿ ನೌಕರರಿಗೆ ಕೊಡುತ್ತಿದ್ದ ಪಿಂಚಣಿಯನ್ನು ನಮಗೂ ಕೊಡಬೇಕು ಎಂದು ಆಗ್ರಹಿಸಿದರು.

ನಿಶ್ಚಿತ ಪಿಂಚಣಿಯನ್ನು ಮರುಸ್ಥಾಪಿಸುವ ಕುರಿತಂತೆ ಕಳೆದ ಜನವರಿ 20ರಂದು ‘ಫ್ರೀಡಂ ಪಾರ್ಕ್ ಚಲೋ’ ಚಳುವಳಿ ಒಂದು ಮೈಲುಗಲ್ಲು ಆಗಿದ್ದು, ನಮ್ಮ ಹೋರಾಟವನ್ನು ಬೆಂಬಲಿಸಿ ಮಾಜಿ ಪ್ರಧಾನಿ ಎಚ್.ಡಿ,ದೇವೇ ಗೌಡ ಅವರು ನೀಡಿರುವ ಹೇಳಿಕೆ ಮತ್ತು ಸಕಾರಾತ್ಮಕ ಸ್ಪಂದನೆ , ಇದೇ ಅಂಶ ಜೆಡಿಎಸ್ ಪ್ರಣಾಳಿಕೆಯಲ್ಲಿ ಮೂಡಿ ಬಂದಿರುವುದು ನೌಕರರ ಪಾಲಿಗೆ ಆಶಾದಾಯಕವಾಗಿದೆ ಎಂದರು. ಪ್ರಸ್ತುತ ಸರ್ಕಾರ ನಿವೃತ್ತಿ ವೇತನ ಹಾಗೂ ಮರಣ ಉಪಧನ ಮತ್ತು ಪಿಂಚಣಿಯನ್ನು 2018ರ ಎಫ್ರಿಲ್ 1ರಿಂದ ಜಾರಿಗೊಳಿಸಿದೆ .ಎನ್‌ಪಿಎಸ್ ನೌಕರರ ಖಾತೆಯಲ್ಲಿ ಇರುವ ತಮ್ಮ ಪಾಲಿನ ವಂತಿಗೆಯ ಶೇ.25ರಷ್ಟನ್ನು ಅನಿವಾರ್ಯ ಸಂದರ್ಭದಲ್ಲಿ ಹಿಂಪಡೆಯುವಂತೆ ಆದೇಶಿಸಿದೆ. ಈ ಆದೇಶಗಳು ಸ್ವಾಗತಾರ್ಹವಾಗಿದ್ದರೂ ಸರ್ಕಾರ ಕೆಲವೊಂದು ಷರತ್ತುಗಳನ್ನು ವಿಧಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದರು.

ಮರಣ ಹೊಂದಿರುವ ಎಸ್‌ಪಿಎಸ್ ನೌಕರರ ಅವಲಂಬಿತ ಕುಟುಂಬಕ್ಕೆ ಪಿಂಚಣಿ ನೀಡಲು ಪ್ರಸ್ತುತ ವಿಧಿಸಿರುವ ಷರತ್ತನ್ನು ಮಾರ್ಪಡಿಸಿ ನೌಕರನ ಖಾತೆಗೆ ಸರ್ಕಾರ ಪಾವತಿಸಿರುವ ತನ್ನಪಾಲಿನ ಮೊತ್ತವನ್ನು ಮಾತ್ರ ಹಿಂಪಡೆಯುವ ಪರತ್ತಿನೊಂದಿಗೆ 2016ರ ಎಫ್ರಿಲ್ 1ರಿಂದಲೇ ಕುಟುಂಬ ಪಿಂಚಣಿ ಪಡೆಯಲು ಅವಕಾಶ ನೀಡಬೇಕು . ಎಸ್‌ಪಿಎಸ್ ನೌಕರರ ಕಾಫಿಯಲ್ಲಿರುವ ನೌಕರರ ಪಾಲಿನ ವಂತಿಗೆಯಲ್ಲಿ ಶೇ.25ರಷ್ಟನ್ನು ಹಿಂಪಡೆಯುವ ಷರತ್ತನ್ನು ಮಾರ್ಪಡಿಸಿ,ನೌಕರರ ಖಾತೆಯಲ್ಲಿನ ಹುಟ್ಟು ವಂತಿಕೆಯಲ್ಲಿ (ನೌಕರ+ಸರ್ಕಾರ) ಶೇ.25ರಷ್ಟನ್ನು ಹಿಂಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಂಘವು ಹೋರಾಟದ ಹಾದಿ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ ಅವರು ‘ರಕ್ತ ಕೊಟ್ಟೇವು-ಪಿಂಚಣಿ ಬಿಡೆವು’ ನಮ್ಮ ಮುಂದಿನ ಹೋರಾಟವಾಗಿದ್ದು, ಏಕಕಾಲದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸರ್ಕಾರಿ ಎನ್‌ಪಿಎಸ್ ನೌಕರರು ರಕ್ತದಾನ ಮಾಡುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಆದರ್ಶ ಬಂಟ್ವಾಳ, ಪುತ್ತೂರು ತಾಲೂಕು ಘಟಕದ ಕಾರ್ಯದರ್ಶಿ ವಿಮಲ್‌ಕುಮಾರ್ ನೆಲ್ಯಾಡಿ, ತಾಲೂಕು ಸಂಚಾಲಕ ಧರ್ಮಾನಂದ ಮತ್ತು ತಾಲೂಕು ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News