×
Ad

ನಿಟ್ಟೆ ತ್ಯಾಜ್ಯ ವಿಲೇವರಿ ಘಟಕಕ್ಕೆ ಪಡುಬಿದ್ರೆ ಗ್ರಾಪಂ ನಿಯೋಗ ಭೇಟಿ

Update: 2018-06-27 20:32 IST

ಪಡುಬಿದ್ರೆ, ಜೂ. 27: ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ವಹಿಸಿ ಜಿಲ್ಲೆಯಲ್ಲಿ ಪೈಲೆಟ್ ಗ್ರಾಮ ಪಂಚಾಯ್ತಿಯಾಗಿ ಆಯ್ಕೆಯಾದ ಉಡುಪಿ ಜಿಲ್ಲಾಧಿಕಾರಿಯವರ ಮೆಚ್ಚುಗೆಗೆ ಪಾತ್ರವಾದ ನಿಟ್ಟೆ ಗ್ರಾಮ ಪಂಚಾಯ್ತಿಗೆ ಪಡುಬಿದ್ರೆ ಗ್ರಾಮ ಪಂಚಾಯ್ತಿ ನಿಯೋಗ ಬುಧವಾರ ಭೇಟಿ ನೀಟಿ ಮಾಹಿತಿ ಪಡೆದುಕೊಂಡರು.

ನಿಟ್ಟೆ ಗ್ರಾಮ ಪಂಚಾಯ್ತಿ ಕಟ್ಟಡದ ಆವರಣದಲ್ಲೇ ಅತ್ಯಂತ ಸುವ್ಯಸ್ಥಿತವಾಗಿ ಕೇವಲ ಐವರು ಸ್ವಯಂ ಸೇವಕರ ನೆರವಿನೊಂದಿಗೆ ವ್ಯವಸ್ಥಿತಿ ರೀತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಡೆಸಿ ಜಿಲ್ಲೆಯಲ್ಲೇ ನಿಟ್ಟೆ ಗ್ರಾಮ ಪಂಚಾಯಿತಿ ಗಮನಸೆಳೆದಿದೆ.

ಈಗಾಗಲೇ ಎರಡು ಹಂತದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ನಿಟ್ಟೆ ಮೂರನೇ ಹಂತದಲ್ಲಿ ಸರ್ಕಾರದಿಂದ ಒದಗಿಸಲಾದ ಒಂದೂವರೆ ಎಕ್ರೆ ಜಾಗದಲ್ಲಿ ಬ್ರಹತ್ ಮಟ್ಟದ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದೆ. ಈ ಆಧುನಿಕ ಘಟಕ ಆರಂಭಗೊಂಡಲ್ಲಿ ನಿಟ್ಟೆಯಲ್ಲದೆ ಆಸುಪಾಸಿನ ಗ್ರಾಮಗಳ ತ್ಯಾಜ್ಯಗಳನ್ನೂ ಸ್ವೀಕರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಪಂಚಾಯ್ತಿ ಪಿಡಿಒ ಮಾಧವರಾವ್ ದೇಶಪಾಂಡೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಮಾರು 3 ಸಾವಿರ ಮನೆಗಳಿರುವ ನಿಟ್ಟೆಯಲ್ಲಿ ಪ್ರಥಮ ಹಂತವಾಗಿ 300 ಅಂಗಡಿ ಮತ್ತು ಮನೆಗಳನ್ನು ಆರಿಸಿ ಅಲ್ಲಿಂದ ದಿನಕ್ಕೆ 2 ಬಾರಿ ಕಸ ಸಂಗ್ರಹಿಸಿ ಪಂಚಾಯಿತಿ ಆವರಣದಲ್ಲಿಯೇ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿದೆ. 2ನೇ ಹಂತದಲ್ಲಿ ನಿಟ್ಟೆ ವಿವಿಧ ವ್ಯಾಪ್ತಿಯನ್ನು ಆರಿಸಿ ಅವರದೇ ಅನುದಾನ ಬಳಸಿ ತ್ಯಾಜ್ಯ ವಿಲೇವಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.

ಪಂಚಾಯ್ತಿಯಿಂದ ಗೋಶಾಲೆ: ಪಂಚಾಯ್ತಿ ವತಿಯಿಂದಲೇ ಗೋ ಶಾಲೆಯೊಂದನ್ನು ಆರಂಭಿಸಿದ್ದು, ತರಕಾರಿ ಮತ್ತಿತರ ತ್ಯಾಜ್ಯಗಳನ್ನು ಬಳಸಲಾಗುತ್ತಿದೆ. ಕೋಳಿ ಸಾಕಣಿಕೆಯನ್ನು ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಕಟ್ಟಡದ ತಾರಸಿಯಲ್ಲಿ ತರಕಾರಿ ಬೆಳೆಗಳನ್ನು ನಡೆಸಲಾಗಿದೆ. ಪ್ಲಾಸ್ಟಿಕ್‌ಗಳನ್ನು ವಿಂಗಡಿಸಿ ಗುಜರಿ ಅಥವಾ ಪ್ಲಾಸ್ಟಿಕ್ ಕಂಪನಿಗಳಿಗೆ ನೀಡಲಾಗುತ್ತಿದೆ. ಕಸದಿಂದ ತಯಾರಿಸಿದ ವಿವಿಧ ಬಗೆಯ ಗೊಬ್ಬರಗಳಿಗೆ ಹೆಚ್ಚು ಬೇಡಿಕೆಯಿದೆ. ಅದಕ್ಕಾಗಿ ಪ್ರತ್ಯೇಕ ಮಾರಾಟ ಕೌಂಟರ್ ಆರಂಭಿಸಲಾಗಿದೆ.

ಡಿಸಿಯ ಮೆಚ್ಚುಗೆ ಪಡೆದ ಗ್ರಾಪಂ: ಜಿಲ್ಲಾಧಿಕಾರಿಯವರಿಗೂ ಇಲ್ಲಿನ ಘಟಕದ ಬಗ್ಗೆ ಮೆಚ್ಚುಗೆ ಇದ್ದು ಇತರ ಗ್ರಾಮ ಪಂಚಾಯ್ತಿಗಳಿಗೆ ಪೈಲೆಟ್ ಗ್ರಾಮವನ್ನಾಗಿ ಗುರುತಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ನಿಟ್ಟೆ ಗ್ರಾಮದ ಮದನಾಡು ಎಂಬಲ್ಲಿ ಒಂದೂವರೆ ಎಕ್ರೆ ಜಾಗವನ್ನು ಗ್ರಾಪಂಗೆ ಒದಗಿಸಲಾಗಿದೆ. ಆ ಬಳಿಕ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಕಸ ಸಂಗ್ರಹ ಆರಂಬಿಸಲಾಗುವುದು. ಗ್ರಾಮದ ನಾಗರಿಕರು ಹಾಗೂ ಪಂಚಾಯಿತಿ ಸದಸ್ಯರು ಘಟಕ ಆರಂಭಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು ಯೋಜನೆ ಯಶಸ್ಸಿಗೆ ಪೂರಕವಾಗಿದೆ ಎಂದು ದೇಶಪಾಂಡೆ ಹೇಳಿದರು.

ಶೀಘ್ರದಲ್ಲೇ ಘಟಕ: ಪಡುಬಿದ್ರೆಯಲ್ಲಿ ಸರ್ಕಾರಿ ಜಾಗದ ಕೊರತೆಯಿದೆ. ಸರ್ಕಾರ ಆಸಕ್ತಿ ವಹಿಸಿ ಸೂಕ್ತ ಜಾಗ ನೀಡಿದಲ್ಲಿ ಅತೀ ಶೀಘ್ರದಲ್ಲಿ ಘಟಕ ಆರಂಭಿಸಲಾಗುವುದು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಹೇಳಿದ್ದಾರೆ.

ಪಡುಬಿದ್ರಿಯ ಎನ್‌ಟಿಪಿಸಿ ಗೋಡೌನ್ ಹಾಗೂ ಅದರ ಪಕ್ಕ 42 ಸೆಂಟ್ಸ್ ಸರಕಾರಿ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಪಡುಬಿದ್ರಿ ಪಂಚಾಯಿತಿ ವತಿಯಿಂದ ಮನವಿ ಮಾಡಲಾಗಿದೆ. ಅದು ದೊರೆತಲ್ಲಿ ನಿಟ್ಟೆ ಘಟಕ ಮಾದರಿಯಲ್ಲಿ ಸುವ್ಯವಸ್ಥಿತ ಘನ ತ್ಯಾಜ್ಯ ಘಟಕ ಆರಂಭಿಸಲಿದ್ದೇವೆ. ಅಲ್ಲಿವರೆಗೆ ಪಂಚಾಯಿತಿ ಆವರಣ ಅಥವಾ ಮಾರ್ಕೆಟ್ ಬಳಿಯ ಸರ್ಕಾರಿ ಜಾಗದಲ್ಲಿ ಶೀಘ್ರ ತ್ಯಾಜ್ಯ ಘಟಕ ಆರಂಭಿಸಲಿದ್ದೇವೆ. ಇಲ್ಲಿ ಸುಮಾರು 6500 ಮನೆಗಳಿದ್ದು ಘನ ತ್ಯಾಜ್ಯ ಅಧಿಕವಾಗಿ ಹೊರಬರುತ್ತಿದೆ. ಅದಕ್ಕೆ ಪೂರಕವಾಗಿ ಘಟಕ ಸ್ಥಾಪನೆ ಮಾಡಲಾಗುವುದು ಎಂದು  ಪಿಡಿಒ ಪಂಚಾಕ್ಷರಿ ಸ್ವಾಮಿ ಹೇಳಿದ್ದಾರೆ.

ಗ್ರಾಪಂ ಸದಸ್ಯರಾದ ನವೀನ್ ಎನ್.ಶೆಟ್ಟಿ, ಶ್ರೀನಿವಾಸ ಶರ್ಮ, ರವಿ ಶೆಟ್ಟಿ, ಸೇವಂತಿ ಸದಾಶಿವ್, ಲಕ್ಷ್ಮಣ ಅಮೀನ್, ಜಾನಕಿ, ಸುಮಿತ್ರಾ, ಸಾಧನಾ, ಸಂಜೀವಿ ಪೂಜಾರ್ತಿ ಭಾಗವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News