×
Ad

ಚಿದಂಬರಂ ಸಂಬಂಧಿಯ ಹತ್ಯೆ: ಮೂವರ ಸೆರೆ

Update: 2018-06-27 21:01 IST

ತಿರುಪುರ,ಜೂ.27: ಸೋಮವಾರದಿಂದ ನಾಪತ್ತೆಯಾಗಿದ್ದ, ಮಾಜಿ ಕೇಂದ್ರ ವಿತ್ತಸಚಿವ ಪಿ.ಚಿದಂಬರಂ ಅವರ ನಿಕಟ ಸಂಬಂಧಿ ಹಾಗು ಕೈಗಾರಿಕೋದ್ಯಮಿ ಎಸ್.ಶಿವಮೂರ್ತಿ(47) ಅವರ ಶವವು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತಿರುಪುರದ ಕರುಮಾರಮ್ಮಪಾಳ್ಯಂ ಬಳಿ ಉಥುಕುಲಿ ರೋಡ್ ಎಂಬಲ್ಲಿ ಸಿದ್ಧ ಉಡುಪುಗಳ ರಫ್ತು ಕಂಪನಿಯನ್ನು ನಡೆಸುತ್ತಿದ್ದ ಶಿವಮೂರ್ತಿ ಸೋಮವಾರ ಮಧ್ಯಾಹ್ನ ತನ್ನ ಕಾರಿನಲ್ಲಿ ಕೊಯಮತ್ತೂರಿಗೆ ಪ್ರಯಾಣಿಸಿದ್ದರು. ಆದರೆ ಅವರು ಮಂಗಳವಾರವೂ ಮನೆಗೆ ವಾಪಸಾಗಿರಲಿಲ್ಲ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ತನ್ನ ತಂದೆಗೆ ಮಾಡಿದ್ದ ಕೊನೆಯ ಕರೆಯಲ್ಲಿ ಅವರು ತಾನು ಊಟಕ್ಕೆ ಮನೆಗೆ ಮರಳುವುದಾಗಿ ತಿಳಿಸಿದ್ದರು. ಅವರು ಕೊಯಮತ್ತೂರಿನಿಂದ ಕರೆಯನ್ನು ಮಾಡಿದ್ದರು ಎಂದು ಹೇಳಲಾಗಿದೆಯಾದರೂ, ಅವರ ಮೊಬೈಲ್ ಸಂಕೇತಗಳನ್ನು ಅಂತಿಮವಾಗಿ ಸತ್ಯಮಂಗಲಂ ಸಮೀಪ ಪತ್ತೆ ಹಚ್ಚಲಾಗಿತ್ತು.

ಪೊಲೀಸರು ತಮಗೆ ದೊರಕಿದ ಸುಳಿವೊಂದರ ಮೇರೆಗೆ ವಿಮಲ್,ಮಣಿಭಾರತಿ ಮತ್ತು ಗೌತಮ ಎನ್ನುವವರನ್ನು ಆಂಬೂರು ಬಳಿಯಿಂದ ಬಂಧಿಸಿದ್ದು, ಶಿವಮೂರ್ತಿಯನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಅವರು ಬಾಯಿಬಿಟ್ಟಿದ್ದರು. ಅವರು ನೀಡಿದ್ದ ಮಾಹಿತಿಯ ಮೇರೆಗೆ ಕೃಷ್ಣಗಿರಿ ಸಮೀಪದ ಕೆರೆಯೊಂದರಲ್ಲಿ ಶಿವಮೂರ್ತಿಯವರ ಶವವನ್ನು ಪೊಲೀಸು ಪತ್ತೆ ಹಚ್ಚಿದ್ದಾರೆ.

ವ್ಯವಹಾರ ದ್ವೇಷ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ ಯಾದರೂ,ನಿಖರ ಕಾರಣ ತನಿಖೆಯ ಬಳಿಕವೇ ದೃಢಪಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News