ಭಾರತದಿಂದ 100 ಶೇ. ಆಮದು ತೆರಿಗೆ: ಡೊನಾಲ್ಡ್ ಟ್ರಂಪ್ ಆರೋಪ
ವಾಶಿಂಗ್ಟನ್, ಜೂ. 27: ಅಮೆರಿಕದ ಉತ್ಪನ್ನಗಳ ಆಮದಿನ ಮೇಲೆ ಭಾರತ 100 ಶೇಕಡದಷ್ಟು ತೆರಿಗೆ ವಿಧಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಆರೋಪಿಸಿದ್ದಾರೆ.
‘‘ನಮಗೆ 100 ಶೇಕಡ ಆಮದು ಸುಂಕ ವಿಧಿಸುವ ದೇಶಗಳಿವೆ. ಉದಾಹರಣೆಗೆ; ಭಾರತ. ಈ ಸುಂಕವನ್ನು ತೆಗೆದುಹಾಕಬೇಕೆಂದು ನಾವು ಬಯಸುತ್ತೇವೆ’’ ಎಂದು ಟ್ರಂಪ್ ಹೇಳಿದರು.
ವಿದೇಶಿ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕ ಸರಕಾರ ಇತ್ತೀಚೆಗೆ ವಿಧಿಸಿರುವ ಸುಂಕಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
ಈ ಸುಂಕಗಳನ್ನು ಸಮರ್ಥಿಸಿಕೊಂಡ ಟ್ರಂಪ್, ಚೀನಾ, ಐರೋಪ್ಯ ಒಕ್ಕೂಟ ಮತ್ತು ಭಾರತ ಸೇರಿದಂತೆ ಪ್ರಮುಖ ವ್ಯಾಪಾರಿ ಭಾಗೀದಾರರೊಂದಿಗೆ ಅಮೆರಿಕ ಹೊಂದಿರುವ ವ್ಯಾಪಾರ ಅಸಮಾನತೆಯನ್ನು ಸರಿಪಡಿಸುವುದಕ್ಕಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಮುಂದಿನ ವಾರ ಭಾರತ-ಅಮೆರಿಕ ನಡುವೆ 2+2 ಮಾತುಕತೆ
ಭಾರತ ಮತ್ತು ಅಮೆರಿಕ ನಡುವೆ ಮೊದಲ 2+2 ಮಾತುಕತೆಗಳು ಮುಂದಿನ ವಾರ ನಡೆಯಲಿವೆ. ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಜೊತೆ ಅಮೆರಿಕದಲ್ಲಿ ಮಾತುಕತೆ ನಡೆಸಲಿದ್ದಾರೆ.