×
Ad

ಝಾರ್ಖಂಡ್ ಗ್ಯಾಂಗ್ ರೇಪ್ ಪ್ರಕರಣ: ಕಠಿಣ ಕ್ರಮಕ್ಕೆ ಜನವಾದಿ ಮಹಿಳಾ ಸಂಘಟನೆ ಒತ್ತಾಯ

Update: 2018-06-27 21:49 IST

ಉಡುಪಿ, ಜೂ.27: ಝಾರ್ಖಂಡ್‌ನ ಕುಂತಿಜಿಲ್ಲೆಯ ಕೋಚಾಂಗ್ ಗ್ರಾಮದ ಎನ್‌ಜಿಒ ಒಂದರಲ್ಲಿ ಕೆಲಸ ಮಾಡುವ ಐವರು ಮಹಿಳೆಯರ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಬಿಜೆಪಿ ಆಡಳಿತವಿರುವ ಈ ರಾಜ್ಯದಲ್ಲಿ ಲಜ್ಜೆಗೆಟ್ಟ ರೀತಿಯಲ್ಲಿ ಬಂದೂಕಿನ ನಿಶಾನೆಯಲ್ಲಿ ಮಹಿಳೆಯರನ್ನು ಅಪಹರಿಸಿ, ಅತ್ಯಾಚಾರವೆಸಗಿ ನಂತರ ಈ ಅಪರಾಧವನ್ನು ದಾಖಲಿಸದ ರೀತಿಯಲ್ಲಿ ಮುಚ್ಚಿಹಾಕುವ ಪ್ರಯತ್ನಗಳು ಅಲ್ಲಿನ ಕಾನೂನು ಬಾಹಿರ ಮತ್ತು ಭಯದ ವಾತಾವರಣವನ್ನು ತೋರಿಸುತ್ತದೆ. ಇದು ವಲಸೆ ಮತ್ತು ಮಾನವ ಸಾಕಣೆ ವಿಚಾರದ ಕುರಿತು ಪ್ರಚಾರ ಮತ್ತು ಅರಿವು ಮೂಡಿಸುತ್ತಿದ್ದ ಮಹಿಳೆಯರ ರಕ್ಷಣೆಯಲ್ಲಿ ಸ್ಥಳೀಯ ಆಡಳಿತದ ವ್ಯೆಫಲತೆಯನ್ನು ಎತ್ತಿ ತೋರಿಸುತ್ತದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಐವರು ಮಹಿಳೆಯರ ಅಪಹರಣ, ಗ್ಯಾಂಗ್‌ರೇಪ್ ಮತ್ತು ಬೆದರಿಕೆ ರಾಜ್ಯದಲ್ಲಿರುವ ಸಂವಿಧಾನೇತರ ಕಾನೂನು ಬಾಹಿರ ಸ್ವಯಂ ಘೋಷಿತ ಜಾಗರೂಕ ಸಮಿತಿಗಳು ಮುಕ್ತವಾಗಿ ಯಾರ ನಿಯಂತ್ರಣವಿಲ್ಲದೆ ನಡೆಸುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಉದಾಹರಣೆಯಾಗಿದೆ. ಇದಕ್ಕೆ ಬಿಜೆಪಿ, ಸಂಘ ಪರಿವಾರದ ರಾಜಕೀಯ ಪ್ರೋತ್ಸಾಹಗಳೇ ಕಾರಣ. ಇದು ಬಿಜೆಪಿ ಆಳ್ವಿಕೆ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ವ್ಯೆಫಲ್ಯವನ್ನು ತೋರಿಸುತ್ತದೆ.

ಈ ಪ್ರಕರಣವನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ವಿಳಂಬ ಮಾಡದೇ ನಿರ್ದಿಷ್ಟ ಕಾಲಮಿತಿಯೊಳಗೆ ನಿಜವಾದ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಜನವಾದಿ ಮಹಿಳಾ ಸಂಘಟನೆಯ ಕುಂದಾಪುರ ತಾಲೂಕು ಸಮಿತಿ ಒತ್ತಾಯಿಸುತ್ತದೆ ಎಂದು ಸಂಚಾಲಕಿ ಶೀಲಾವತಿ ಪಡುಕೋಣೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News