ಜು.1: ಏಕಕಾಲದಲ್ಲಿ 90 ವೀಣೆಗಳ ಸಮೂಹ ವಾದನ
ಉಡುಪಿ, ಜೂ.27: ಡಾ. ಪಳ್ಳತಡ್ಕ ಕೇಶವ ಭಟ್ ಸ್ಮಾರಕ ಟ್ರಸ್ಟ್ ಮಣಿಪಾಲ ಹಾಗೂ ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಕಲಾಸ್ಪಂದನ ಶಾಲೆಯ 23ನೆಯ ವಾರ್ಷಿಕೋತ್ಸವ ಜು.1ರಂದು ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಜು.1ರಂದು ಬೆಳಗ್ಗೆ 8:30ಕ್ಕೆ ರಾಜಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ವೀಣಾ ವಾದನ ಶಿಕ್ಷಣ ನೀಡುತ್ತಿರುವ 9 ಗುರುಗಳಿಗೆ ಸನ್ಮಾನಿಸಲಾಗುವುದು. ತುಳಸಿ ಮಹತ್ವವನ್ನು ಸಾರಲು ಉಡುಪಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಏಕಕಾಲದಲ್ಲಿ 90 ವೀಣೆಗಳ ಸಮೂಹ ವಾದನ ನಡೆಯಲಿದೆ. ನಂತರ ಬೆಂಗಳೂರಿನ ಖ್ಯಾತ ವೀಣಾವಾದಕಿ ವಿದುಷಿ ಯೋಗವಂದನ ಕಾರ್ಯಕ್ರಮ ನೀಡಲಿದ್ದಾರೆ.
ಸಂಜೆ 7 ರಿಂದ ಮಣಿಪಾಲದ ವಿದುಷಿ ಅರುಣಾ ಕುಮಾರಿ ಇವರ ವೀಣಾ ವಾದನ, ವಿಪಂಚಿ ಬಳಗ ಮಣಿಪಾಲ ಇವರ ಪಂಚವೀಣಾ ವಾದನ ಹಾಗೂ ಕಲಾಸ್ಪಂದನ ವಿದ್ಯಾರ್ಥಿಗಳಿಂದ ‘ರಾಘವೇಂದ್ರ ಮಹಿಮೆ’ ವೀಣಾ ನಾಟಕ ನಡೆಯಲಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.