×
Ad

ಬೆಳ್ತಂಗಡಿ: ಸಿದ್ದರಾಮಯ್ಯರನ್ನು ಭೇಟಿಯಾದ ಸಚಿವರಾದ ರಮೇಶ್ ಜಾರಕಿಹೊಳಿ, ಶಿವಾನಂದ ಪಾಟೀಲ್

Update: 2018-06-27 22:30 IST

ಬೆಳ್ತಂಗಡಿ, ಜೂ. 27: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ನೇತೃತ್ವದಲ್ಲಿ ಸಂಸದರು, ಶಾಸಕರು ಮಾಜಿ ಸಚಿವರುಗಳು ಸೇರಿದಂತೆ ಹಲವರು ಕಾಂಗ್ರೆಸ್ ಮುಖಂಡರುಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಮುಖಂಡರುಗಳು ತಮ್ಮದೇ ಆದ ದಾಟಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೇಳಿಕೆ ನೀಡಿದರು. ಆದರೆ ಸಿದ್ದರಾಮಯ್ಯ ಅವರು ಮಾತ್ರ ಇಂದೂ ಮಾಧ್ಯಮದವರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಅಭಿಮಾನಿಗಳ ಸೆಲ್ಫಿಗೆ ಫೋಸ್ ನೀಡಿ ಹಿಂತಿರುಗಿದರು.

ಇಂದು ನಡೆದ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿರುವ ಸಚಿವರುಗಳು ಹಾಗೂ ಶಾಸಕರುಗಳು ಶಾಂತಿವನಕ್ಕೆ ಆಗಮಿಸಿದ್ದು ಸಿದ್ದರಾಮಯ್ಯ ಅವರಿಗೆ ಬೆಂಬಲ ಘೋಷಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡಿಗೆ ಸೂಚನೆಯನ್ನು ನೀಡಿದ್ದಾರೆ. ಇದು ಕಾಂಗ್ರೆಸ್ ವಲಯದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ.

ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ನೇತೃತ್ವದಲ್ಲಿ ಅಧಣಿ ಶಾಸಕ ಮಹೇಶ್ ಕುಮಟ್ಟಳ್ಳಿ, ಕಾಗವಾಡದ ಶಾಸಕ ಶ್ರೀಮಂತ ಪಾಟೀಲ್, ಬಸವಕಲ್ಯಾಣದ ಶಾಸಕ ಬಿ.ನಾರಾಯಣ, ಬಳ್ಳಾರಿ ಶಾಸಕ ನಾಗೇಂದ್ರ, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ವಿವೇಕ್ ರಾವ್ ಪಾಟೀಲ್, ಹಾಗೂ ರಾಯಚೂರು ಸಂಸದಬಿ.ವಿ ನಾಯಕ್ ಅವರು ಕಾರು ಹಾಗೂ ಒಂದು ಟೆಂಪೋ ಟ್ರಾವಲರ್‌ನಲ್ಲಿ ಮಧ್ಯಾಹ್ನ 1.15 ಕ್ಕೆ ಶಾಂತಿವನಕ್ಕೆ ಆಗಮಿಸಿದ್ದಾರೆ.

ನೇರವಾಗಿ ಸಿದ್ದರಾಮಯ್ಯ ಅವರ ಕೊಠಡಿಗೆ ತೆರಳಿದ ಸಚಿವರುಗಳು ಹಾಗೂ ಶಾಸಕರುಗಳು ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ 2.45 ರ ಸುಮಾರಿಗೆ ಎಲ್ಲರೂ ಶಾಂತಿವನದಿಂದ ಹೊರಬಂದಿದ್ದಾರೆ. ಇದಾದ ಬಳಿಕ ಕೆಲವೇ ಸಮಯದಲ್ಲಿ ಮಾಜಿ ಸಚಿವರಾದ ಟಿ.ಬಿ ಜಯಚಂದ್ರ ಅವರು ಶಾಂತಿವನಕ್ಕೆ ಆಗಮಿಸಿದರು. ಈ ಸಂದರ್ಭ ಸಿದ್ದರಾಮಯ್ಯ ಅವರು ಚಿಕಿತ್ಸೆಯಲ್ಲಿ ಇದ್ದರು ಅದರಿಂದಾಗಿ ಕೆಲಸಮಯ ಕಾದು ಬಳಿಕ ಅವರೂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು. ಮಾಜಿ ಸಚಿವರಾದ ಆಂಜನೇಯ, ಮಾಜಿ ಶಾಸಕ ಕೆ ವಸಂತ ಬಂಗೇರ ಅವರೂ ಇಂದು ಶಾಂತಿವನಕ್ಕೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದರು.

ಸಿದ್ದರಾಮಯ್ಯ ಅವರ ಚಿಕಿತ್ಸೆ ಗುರುವಾರ ಪೂರ್ಣಗೊಳ್ಳಲಿದ್ದು ಅವರು ಗುರುವಾರ ಸಂಜೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಗುರುವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ  ಭೇಟಿ ನೀಡಲಿದ್ದಾರೆ ಬಳಿಕ ಮಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಅವರು ಸಂಜೆ 7 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ನಾಯಕರು ಅವರು ಯಾವಾಗಲೂ ನಮ್ಮೊಂದಿಗಿದ್ದಾರೆ, ನಾವು ಸದಾ ಅವರೊಂದಿಗಿದ್ದೇವೆ. ಪಕ್ಷದಲ್ಲಿ ಸರಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ನಾಯಕರಾದ ಸಿದ್ಧರಾಮಯ್ಯನವರ ಆರೋಗ್ಯ ವಿಚಾರಿಸಲು ಬಂದಿರುವುದೇ ಹೊರತು ರಾಜಕೀಯಕ್ಕಲ್ಲ. ಆಯಷ್ ವಿಭಾಗ ನನ್ನ ಸಚಿವಾಲಯದೊಳಗೆ ಬರುತ್ತದೆ. ಇಲ್ಲಿ ಹಲವು ಸಮಸ್ಯೆಗಳಿವೆ ಎಂದು ಮಾಜಿ ಶಾಸಕ ವಸಂತ ಬಂಗೇರ ತಿಳಿಸಿದ್ದಾರೆ.

ಆಲೋಪತಿಗಿಂತ ಆಯಷ್ ಚಿಕಿತ್ಸೆ ಹೆಚ್ಚಿನ ಮಹತ್ವವನ್ನು ಹೊಂದಿದ್ದು ಅದನ್ನು ಇನ್ನಷ್ಟು ಸಮೃದ್ಧಗೊಳಿಸುವ ಉದ್ದೇಶದಿಂದ ಇಲ್ಲಿನ ವಿಚಾರಗಳನ್ನು ತಿಳಿಯಲು ಬಂದಿರುವೆ. ಇಲ್ಲಿನ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ. ನಾನು ನನ್ನಷ್ಟಕ್ಕೆ ವೈಯಕ್ತಿಕವಾಗಿ ಬಂದಿದ್ದೇನೆ. ಸರಕಾರಿ ಪ್ರವಾಸ ನನ್ನದಲ್ಲ. ಉಳಿದವರು ಅವರಾಗಿಯೇ ಬೇರೆ ವಿಮಾನದಲ್ಲಿ ಬಂದಿದ್ದಾರೆ. ಸಚಿವರ, ನಿಗಮ ಮಂಡಳಿಯವ ಬಗ್ಗೆ ಯಾರಿಗೂ ಅತೃಪ್ತಿ ಇಲ್ಲ. ಇದರ ಬಗ್ಗೆ ಮಾತನಾಡಲೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ರಮೇಶ್ ಜಾರಕಿ ಹೊಳಿ ಅವರು, ರಾಜಕೀಯ ಬಗ್ಗೆ ಏನೂ ಚರ್ಚೆ ಆಗಿಲ್ಲ. ಅವರು ನಾಯಕರು, ಆರೋಗ್ಯ ವಿಚಾರಿಸಲು ಬಂದಿದ್ದೇನೆ ಎಂದಷ್ಟೇ ಹೇಳಿ ಯಾವುದೇ ಮಾತನ್ನಾಡದೆ ಮುಂದುವರಿದರು.

ಬಸವ ಕಲ್ಯಾಣ ಶಾಸಕ ಬಿ. ನಾರಾಯಣ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ನ 80 ಮಂದಿ ಶಾಸಕರು ಗೆದ್ದು ಬಂದಿದ್ದಾರೆ ಅವರನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಅವರನ್ನು ಕಡೆಗಣಿಸಿದರೆ ಸರಕಾರ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅವರೊಬ್ಬ ಮಾಸ್ ಲೀಡರ್ ಸಮ್ಮಿಶ್ರ ಸರಕಾರದಲ್ಲಿ ಎಲ್ಲ ನಡೆಯುತ್ತಿರುವುದು ಅವರ ನಾಯಕತ್ವದಲ್ಲಿಯೇ ಆಗಿದೆ. ಅವರೇ ಸದಾ ನಮ್ಮ ನಾಯಕರಾಗಿದ್ದಾರೆ ಅವರು ಮಾಜಿ ಮುಖ್ಯಮಂತ್ರಿಗಳು, ಸಮನ್ವಯ ಸಮಿತಿ ಅಧ್ಯಕ್ಷರು ಹೀಗಾಗಿ ಅವರನ್ನು ಭೇಟಿಯಾಗದೇ ಇನ್ಯಾರನ್ನು ನಾವು ಭೇಟಿಯಾಬೇಕು ? ನಾವು ಕೇವಲ ಆರೋಗ್ಯ ವಿಚಾರಿಸಲು ಬಂದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅಹಿಂದ ಏನೂ ಇಲ್ಲ. ಸಮ್ಮಿಶ್ರ ಸರಕಾರ ಅವರ ನೇತೃತ್ವದಲ್ಲೇ ನಡೆಯುತ್ತಿದೆ. ಅವರನ್ನು ಬಿಟ್ಟು ನಡೆಸಲು ಸಾಧ್ಯವೇ ? ಕಡೆಗಣಿಸುವುದೆಲ್ಲ ಮಾಧ್ಯಮ ಸೃಷ್ಟಿ ಎಂದರು.

ಮಾಜಿ ಸಚಿವ ಬಿ.ಟಿ.ಜಯಚಂದ್ರ ಅವರು, ಚುನಾವಣೆ ಕಳೆದ ಮೇಲೆ ಧರ್ಮಸ್ಥಳಕ್ಕೆ ಬರಬೇಕೂಂತ ಇದ್ದೆ. ಆದರೆ ಆಗಲಿಲ್ಲ. ಈಗ ಸಿದ್ದರಾಮಯ್ಯ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನುಭವವನ್ನು ಆಧರಿಸಿ ನಾನೂ ಮುಂದಿನ ತಿಂಗಳು ಚಿಕಿತ್ಸೆ ಪಡೆಯುವವನಿದ್ದೇನೆ. ಬಜೆಟ್ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಎಂಬುದು ಸಮನ್ವಯ ಸಮಿತಿ ಸಭೆಯ ತೀರ್ಮಾನವನ್ನು ಆಧರಿಸಿ ಮಾಡಬೇಕಾಗುತ್ತದೆ. ಸಮನ್ವಯ ಸಮಿತಿ ಅಧ್ಯಕ್ಷರು ಸಿದ್ಧರಾಮಯ್ಯ ಅವರೇ ಆಗಿದ್ದಾರೆ. ಅವರು ಬೆಂಗಳೂರಿಗೆ ಬಂದಬಳಿಕ ಸಮನ್ವಯ ಸಮಿತಿಯ ಸಭೆ ನಡೆಯಲಿದೆ. ಅಲ್ಲಿ ಎಲ್ಲವೂ ನಿರ್ಧರವಾಗಲಿದೆ ಎಂದರು. ನಿಮಗ ಮಂಡಳಿಗೆ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. 13 ಬಜೆಟ್ ಮಂಡಿಸಿದ ಅವರನ್ನೂ ಕೇಳಬೇಕಾಗುತ್ತದೆ. ಸಾಲ ಮನ್ನಾ ಬಜೆಟ್‌ನಲ್ಲಿ ಇಟ್ಟ ತಕ್ಷಣ ಮಾಡಲಾಗುವುದಿಲ್ಲ. ಈ ಬಗ್ಗೆ ಪೂರ್ತಿ ಚರ್ಚೆ ಮಾಡಬೇಕಾಗುತ್ತದೆ. ಬಜೆಟ್ ಅಂದರೆ ಬಜೆಟ್ ಅದರಲ್ಲಿ ಪೂರ್ಣ, ಅಪೂರ್ಣ ಎಂಬುದಿಲ್ಲ. ಪೂರಕ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತದೆ. ಸಮ್ಮಿಶ್ರ ಸರಕಾರಕ್ಕೆ ಜನಾದೇಶವಿದೆ. ಆಯಾ ಪಕ್ಷಗಳೊಂದಿಗೆ ಹೊಂದಾಣಿಕೆ ಆಗಿದೆ. ಬಜೆಟ್ ಬಗ್ಗೆ ಕುಮಾರ ಸ್ವಾಮಿಯವರು ಯಾವ ಹಿನ್ನಲೆಯಲ್ಲಿ ಮಾತನಾಡಿದು ಎಂದು ಗೊತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News