ಮೂಡುಬಿದಿರೆ: ಸರಣಿ ಅಫಘಾತಕ್ಕೆ ಬೈಕ್ ಸವಾರ ಬಲಿ
ಮೂಡುಬಿದಿರೆ, ಜೂ. 27: ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬೆಳುವಾಯಿಯಲ್ಲಿ ಬುಧವಾರ ಸಂಜೆ ನಡೆದ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ, ಉದ್ಯಮಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕೆಸರ್‌ಗದ್ದೆ ನಿವಾಸಿ ವಿನಯ್ ಹೆಗ್ಡೆ (61) ಎಂದು ಗುರುತಿಸಲಾಗಿದೆ.
ಉದ್ಯಮಿ ಆಗಿದ್ದ ಅವರು ಬೆಳುವಾಯಿ ಮುಕ್ತಾನಂದ ಪ್ರೌಢಶಾಲೆಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ಸಂಜೆ ಬೆಳುವಾಯಿಯಿಂದ ಕೆಸರ್‌ಗದ್ದೆಯ ತನ್ನ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಬೆಳುವಾಯಿ ಸಮೀಪ ಎದುರಿನಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿದ ವಿನಯ್ ಅವರ ಬೈಕ್ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇನ್ನೊಂದು ಬೈಕ್ ಸವಾರ ಬನ್ನಡ್ಕದ ಅಖಿಲ್ ಎಂಬವರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.