×
Ad

ನಗರಗಳ ಅಭಿವೃದ್ದಿಗೆ ಕೆಂಪೇಗೌಡರು ಪ್ರೇರಣೆಯಾಗಲಿ: ದಿನಕರ ಬಾಬು

Update: 2018-06-27 22:49 IST

 ಉಡುಪಿ, ಜೂ.27: ಯಾವುದೇ ಗ್ರಾಮ ಆಥವಾ ನಗರಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿ ಪಡಿಸಬೇಕಾದರೆ ಕೆಂಪೇಗೌಡರು, ಬೆಂಗಳೂರು ನಿರ್ಮಾಣದ ಸಂದರ್ದಲ್ಲಿ ತೆಗೆದುಕೊಂಡ ಮುಂದಾಲೋಚನೆ ಕ್ರಮಗಳು ಹಾಗೂ ಅವರ ದೂರ ದೃಷ್ಠಿತ್ವ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ಬುಧವಾರ ಯು.ಕಮಲಬಾಯಿ ಪ್ರೌಢ ಶಾಲೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೆಂಪೇಗೌಡರು ಚಿಕ್ಕವರಿದ್ದಾಗ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಂಡು ಅದೇ ರೀತಿಯ ನಗರನಿರ್ಮಾಣದ ಕನಸು ಕಂಡಿದ್ದು, ಅದೇ ರೀತಿಯಲ್ಲಿ ಬೆಂಗಳೂರುನಗರವನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣ ಮಾಡಿದ್ದರು. ಇಂದಿನ ಆಧುನಿಕ ನಗರಗಳ ನಿರ್ಮಾತೃಗಳು ಸಹ ಇದೇ ರೀತಿಯ ಮುಂದಾಲೋಚನೆ ವಹಿಸಬೇಕು. ಕೆಂಪೇಗೌಡರ ದೂರ ದೃಷ್ಟಿತ್ವ ಅವರಿಗೆ ಪ್ರೇರಣೆಯಾಗಬೇಕು ಎಂದರು.

ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಡಿವೈಎಸ್ಪಿ ಜೈಶಂಕರ್, ಮಣಿಪಾಲ ಅಕಾಡೆಮಿ ಆಪ್ ಜನರಲ್ ಎಜುಕೇಷನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಯು.ಕಮಲಬಾಯಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಮೂರ್ತಿ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

ನಾಡಪ್ರಭು ಕೆಂಪೇಗೌಡರ ಕುರಿತು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ವಿಶೇಷ ಉಪನ್ಯಾಸ ನೀಡಿದರು. ಕೆಂಪೇಗೌಡರ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ದಿಶಾ ಮತ್ತು ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಮತ್ತು ಬಳಗದಿಂದ ಕನ್ನಡ ಹಾಡುಗಳ ಗೀತ ಗಾಯನ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News