ಪೊಲೀಸರೇ ದೂರು ತಯಾರಿಸಿ ಸುಳ್ಳು ಹೇಳಿದ್ದಾರೆ ಎಂದ ಅಬ್ದುಲ್ ಹಮೀದ್
#ಎನ್ ಐಎ ಸೂಚನೆಯಂತೆ ಹೀಗೆ ಮಾಡುತ್ತಿದ್ದೇವೆ ಎಂದ ಆರಕ್ಷಕರು: ಆರೋಪ
ಕಾಸರಗೋಡು, ಜೂ. 28: "ನನ್ನ ಮನೆಯ ಯಾರೂ ನಾಪತ್ತೆಯಾಗಿಲ್ಲ. ಪೊಲೀಸರೇ ಕರೆದಿದ್ದರಿಂದ ನಾನು ಠಾಣೆಗೆ ಹೋಗಿದ್ದೆ. ನನ್ನ ಮನೆಯವರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಸುಳ್ಳು" ಎಂದು ದುಬೈಗೆ ಕುಟುಂಬದ ಜೊತೆ ತೆರಳಿರುವ ಕಾಸರಗೋಡು ನಿವಾಸಿ ಸವಾದ್‍ರ ಪತ್ನಿಯ ತಂದೆ ಅಬ್ದುಲ್ ಹಮೀದ್ ಹೇಳಿದ್ದಾರೆ.
ಕೇರಳದ 'ಮೀಡಿಯಾ ವನ್' ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, "ಯಾವ ದೂರನ್ನೂ ನಾನು ನೀಡಿಲ್ಲ. ಆ ದೂರನ್ನು ಪೊಲೀಸರೇ ತಯಾರಿಸಿದ್ದಾರೆ. ಪೊಲೀಸರು ಕರೆದದ್ದರಿಂದ ನಾನು ಠಾಣೆಗೆ ಹೋಗಿದ್ದೆ ಹಾಗು ಪೊಲೀಸರು ನನ್ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಿದ್ದೆ. ಹಾಳೆಯೊಂದರಲ್ಲಿ ಸಹಿ ಮಾಡಲು ಪೊಲೀಸರು ಇದೇ ಸಂದರ್ಭ ಹೇಳಿದ್ದರು. ನಾನು ಹೇಳಿರುವುದನ್ನು ಅವರು ಬರೆದುಕೊಂಡಿದ್ದಾರೆಂದು ತಿಳಿದು ಅದಕ್ಕೆ ಸಹಿಹಾಕಿದ್ದೆ. ಪೊಲೀಸರು ಸುಳ್ಳು ದೂರನ್ನು ತಯಾರಿಸಿದ್ದಾರೆ ಎನ್ನುವುದು ನನಗೆ ಆಗ ತಿಳಿದಿರಲಿಲ್ಲ. ಮರುದಿನ ಪೊಲೀಸರು ಮನೆಗೆ ಆಗಮಿಸಿ ಇನ್ನೊಂದು ದೂರಿಗೆ ಸಹಿಹಾಕುವಂತೆ ಹೇಳಿದರು. ಆದರೆ ಅದಕ್ಕೆ ಸಹಿಹಾಕಲು ಒಪ್ಪಲಿಲ್ಲ" ಎಂದು ಆರೋಪಿಸಿದ್ದಾರೆ.
"ಠಾಣೆಗೆ ಕರೆಸಿಕೊಂಡು ಪೊಲೀಸರು ದೂರು ತಯಾರಿಸಿ ನನ್ನಿಂದ ಬಲವಂತದಿಂದ ಸಹಿ ಹಾಕಿಸಿಕೊಂಡಿದ್ದಾರೆ. ಎನ್‍ಐಎಯ ಸೂಚನೆ ಪ್ರಕಾರ ದೂರಿಗೆ ಸಹಿಹಾಕಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ" ಎಂದು ಅಬ್ದುಲ್ ಹಮೀದ್ 'ಮೀಡಿಯಾ ವನ್' ಜೊತೆ ಮಾತನಾಡಿದ ವೇಳೆ ಆರೋಪಿಸಿದ್ದಾರೆ.
"ನಾಪತ್ತೆಯಾಗಿದ್ದಾರೆ ಎನ್ನುವ ಮಾತನ್ನು ನಾನು ಹೇಳಿಯೇ ಇಲ್ಲ. ಎರಡು ದಿನಗಳ ಮೊದಲು ನನ್ನ ಮಗಳೊಂದಿಗೆ ಫೋನ್‍ನಲ್ಲಿ ಮಾತನಾಡಿದ್ದೇನೆ. ನನ್ನ ಮಗಳು ಮತ್ತು ಅವಳ ಕುಟುಂಬ ಕಾಣೆಯಾಗಿದೆ ಎಂದು ನಾನು ದೂರು ಕೊಟ್ಟಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಅವರು ಯಮನ್‍ಗೆ ಕಲಿಯಲು ಹೋಗುತ್ತಿದ್ದೇವೆ ಎಂಬ ವಿವರವನ್ನು ನಮಗೆ ತಿಳಿಸಿದ್ದರು. ಹೀಗಿರುವಾಗ ಮತ್ತೇಕೆ ನಾನು ಅಂತಹದೊಂದು ದೂರು ನೀಡಬೇಕು" ಎಂದು ಹಮೀದ್ ಪ್ರಶ್ನಿಸಿದರು.
"ದೂರಿನಲ್ಲಿ ಎಂದು ಬರೆದಿತ್ತೆಂದು ನಾನು ಓದಿ ನೋಡಿಲ್ಲ. ಸಂಜೆ ಮನೆಯಲ್ಲಿದ್ದಾಗ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ವರದಿ ಗಮನಕ್ಕೆ ಬಂತು. ಮಗಳು ಮತ್ತು ಅಳಿಯನನ್ನು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ವರದಿಯಾಗಿದ್ದವು. ಇದನ್ನು ಕಂಡು ಗರಬಡಿದಂತವನಾದೆ" ಎಂದು ಹಮೀದ್ 'ಮೀಡಿಯಾ ವನ್' ಜೊತೆ ಹೇಳಿದ್ದಾರೆ.