ರೋಟರಿ ಕ್ಲಬ್‌ನಿಂದ ನಾಲ್ಕು ಜಿಲ್ಲೆಗಳ 250 ಅಂಗನವಾಡಿ ಕೇಂದ್ರಗಳ ದತ್ತು
ಮಂಗಳೂರು, ಜೂ.28: ರೋಟರಿ ಜಿಲ್ಲಾ ಕ್ಲಬ್ 3181 ತನ್ನ ವ್ಯಾಪ್ತಿಗೆ ಒಳಪಡುವ ದ.ಕ., ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ 250 ಅಂಗನವಾಡಿಗಳನ್ನು ದತ್ತು ಸ್ವೀಕರಿಸಲಿದೆ ಎಂದು ರೋಟರಿ ನೂತನ ಗವರ್ನರ್ ರೋಹಿನಾಥ್‌ಪಾದೆ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ.ಜಿಲ್ಲೆಯಲ್ಲಿ ಕನಿಷ್ಠ 100 ಹಾಗೂ ತನ್ನ ವ್ಯಾಪ್ತಿಯ ಇತರ ಮೂರು ಜಿಲ್ಲೆಗಳಲ್ಲಿ 150 ಅಂಗನವಾಡಿಗಳನ್ನು ‘ಆಶಾ ಸ್ಫೂರ್ತಿ’ ಯೋಜನೆಯಡಿ ದತ್ತು ಸ್ವೀಕರಿಸಿ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರೋಟರಿ ಉದ್ದೇಶಿಸಿದೆ ಎಂದರು.
ಸುಸಜ್ಜಿತ ಶೌಚಾಗೃಹ, ಕುಡಿಯುವ ನೀರಿನ ವ್ಯವಸ್ಥೆ, ಆಟಿಕೆ ವಸ್ತುಗಳು, ನೇಮ್ ಟ್ಯಾಗ್, ಮಧ್ಯಾಹ್ನದ ಬಿಸಿಯೂಟ, ಆಟದ ಮೈದಾನ, ವಾಶ್ ಬೇಸಿನ್ ಸಹಿತ ಪೂರಕ ವ್ಯವಸ್ಥೆಗಳನ್ನು ತಮ್ಮ ಸಂಸ್ಥೆ ಒದಗಿಸಲಿದೆ. ಅಲ್ಲದೆ ದತ್ತುಪಡೆದ ಅಂಗನವಾಡಿಗಳಲ್ಲಿ ಅಭಿವೃಧ್ಧಿ ಕೆಲಸಗಳು ಸರಿಯಾಗಿ ನಡೆದಿದೆಯೇ ಎನ್ನುವ ಕುರಿತು ನಿರಂತರ ಮೇಲ್ವಿಚಾರಣೆ ನಡೆಯಲಿದೆ ಎಂದು ರೋಹಿನಾಥ್ ಪಾದೆ ಹೇಳಿದರು.
ನಗರದ ಬೊಕ್ಕಪಟ್ಣದ ಯುಬಿಎಂಸಿ ಅಂಗನವಾಡಿಯನ್ನು ಮೇಲ್ದರ್ಜೆಗೇರಿಸಿ ಮಾದರಿ ಅಂಗನವಾಡಿಯಾಗಿ ರೂಪಿಸಲಾಗಿದೆ. ಸಂಸ್ಥೆಯ ವತಿಯಿಂದ ಸಂಬಂಧಿಸಿದ ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಲಾಗಿದ್ದು, ಆದ್ಯತೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿರುವ ಅಂಗನವಾಡಿಗಳ ಪಟ್ಟಿ ಕೋರಲಾಗಿದೆ ಎಂದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಕೆ.ಕೃಷ್ಣ ಶೆಟ್ಟಿ ಮತ್ತು ಜಿಲ್ಲಾ ಕಾರ್ಯದರ್ಶಿ (ಯೋಜನೆ) ವಿಕ್ರಮದತ್ತ ಉಪಸ್ಥಿತರಿದ್ದರು.