2017ರಲ್ಲಿ ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಕಪ್ಪುಹಣದ ಪ್ರಮಾಣದಲ್ಲಿ 50 ಶೇ.ದಷ್ಟು ಹೆಚ್ಚಳ!
ಝೂರಿಚ್/ಹೊಸದಿಲ್ಲಿ, ಜೂ.28: ಭಾರತ ಸರಕಾರ ವಿದೇಶದಲ್ಲಿ ಕಪ್ಪುಹಣ ಜಮೆ ಆಗುವುದನ್ನು ತಡೆಗಟ್ಟಲು ಕ್ರಮ ಕೈಗೊಂಡಿರುವ ಹೊರತಾಗಿಯೂ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ 2017ರ ವೇಳೆಗೆ ಶೇ.50ರಷ್ಟು ಹೆಚ್ಚಿದ್ದು 7,000 ಕೋಟಿ ರೂ.ಗೂ ಅಧಿಕವಾಗಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ಬಿಡುಗಡೆಗೊಳಿಸಿದ ವಾರ್ಷಿಕ ಮಾಹಿತಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಎಲ್ಲಾ ವಿದೇಶಿ ಗ್ರಾಹಕರು ಬ್ಯಾಂಕ್‌ನಲ್ಲಿ ಹೊಂದಿರುವ ಠೇವಣಿಯಲ್ಲಿ ಸುಮಾರು ಶೇ.3ರಷ್ಟು ಹೆಚ್ಚಳವಾಗಿದ್ದು 2017ರಲ್ಲಿ ಸುಮಾರು 100 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಸ್ವಿಸ್ ಬ್ಯಾಂಕ್‌ನಲ್ಲಿ ವಿದೇಶಿಯರು ಹೊಂದಿರುವ ಠೇವಣಿಯ ಕುರಿತ ಮಾಹಿತಿಯನ್ನು 1987ರಲ್ಲಿ ಬಹಿರಂಗಗೊಳಿಸಲು ಆರಂಭಿಸಿದ ಬಳಿಕ ಪ್ರಪ್ರಥಮ ಬಾರಿಗೆ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ 2016ರಲ್ಲಿ ಶೇ.45ರಷ್ಟು ಕಡಿಮೆಯಾಗಿ ಸುಮಾರು 4,500 ಕೋಟಿ ರೂ.ಗೆ ಇಳಿದಿತ್ತು.
ಎಸ್‌ಎನ್‌ಬಿ ಮಾಹಿತಿಯ ಪ್ರಕಾರ ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ನೇರವಾಗಿ ಹೊಂದಿರುವ ಠೇವಣಿಯ ಮೊತ್ತ 999 ಮಿಲಿಯನ್ ಸ್ವಿಸ್ ಫ್ರಾಂಕ್ (6,891 ಕೋಟಿ ರೂ.) ಆಗಿದ್ದರೆ, ನಿಷ್ಠರ ಅಥವಾ ಹಣಕಾಸಿನ ವ್ಯವಸ್ಥಾಪಕರ ಮೂಲಕ ಹೂಡಿಕೆ ಮಾಡಿರುವ ಠೇವಣಿಯ ಮೊತ್ತ 16.2 ಮಿಲಿಯನ್ ಸ್ವಿಸ್ ಫ್ರಾಂಕ್ (112 ಕೋಟಿ ರೂ.)ಗೆ ಹೆಚ್ಚಿದೆ. ಈ ಮೊತ್ತವು 2016ರಲ್ಲಿ ಅನುಕ್ರಮವಾಗಿ 664.8 ಸ್ವಿಸ್ ಫ್ರಾಂಕ್ ಹಾಗೂ 11 ಮಿಲಿಯನ್ ಸ್ವಿಸ್ ಫ್ರಾಂಕ್ ಆಗಿತ್ತು. ಇತ್ತೀಚಿನ ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣದಲ್ಲಿ 3,200 ಕೋಟಿ ರೂ. ಗ್ರಾಹಕರ ಠೇವಣಿಯ ರೂಪದಲ್ಲಿ, 1,050 ಕೋಟಿ ರೂ. ಇತರ ಬ್ಯಾಂಕ್‌ಗಳ ಮೂಲಕ ಹಾಗೂ ಸೆಕ್ಯುರಿಟಿಯಂತಹ 'ಇತರ ಬಾಧ್ಯತೆ'ಯ ರೂಪದಲ್ಲಿ 2,640 ಕೋಟಿ ರೂ. ಸೇರಿದೆ.
ಈ ಮೂರೂ ವಿಭಾಗಗಳಲ್ಲಿನ ಠೇವಣಿಯ ಮೊತ್ತದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2017ರ ವರೆಗೆ ನಿಷ್ಠರ ಮೂಲಕ ಇಡಲಾಗಿರುವ ಠೇವಣಿ ಬಿಲಿಯನ್‌ಗಳಲ್ಲಿತ್ತು. ಆದರೆ ಆ ಬಳಿಕ ನಿಯಂತ್ರಕ ಶಿಸ್ತುಕ್ರಮದ ಭಯದಿಂದ ಈ ಮೊತ್ತದಲ್ಲಿ ಇಳಿಕೆಯಾಗಿದೆ. 2006ರ ಅಂತ್ಯದ ವೇಳೆಗೆ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಅತ್ಯಧಿಕ (23,000 ಕೋಟಿ ರೂ.)ವಾಗಿದ್ದರೆ, ಮುಂದಿನ ಒಂದು ದಶಕಾವಧಿಯಲ್ಲಿ ಕ್ರಮೇಣ ಕಡಿಮೆಯಾಗುತ್ತಾ ಸಾಗಿ ಸುಮಾರು 10ನೇ ಒಂದಂಶಕ್ಕೆ ಇಳಿದಿದೆ.
ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿಯ ಮೊತ್ತದಲ್ಲಿ ಕೇವಲ ಮೂರು ಬಾರಿ( 2011, 2013 ಹಾಗೂ 2017ರಲ್ಲಿ ) ಮಾತ್ರ ಏರಿಕೆಯಾಗಿದೆ. 'ಇತರ ಬಾಧ್ಯತೆ' ಅಥವಾ ತನ್ನ ಗ್ರಾಹಕರಿಗೆ ನೀಡಬೇಕಿರುವ ಮೊತ್ತ ವಿಭಾಗದಲ್ಲಿ ಎಸ್‌ಎನ್‌ಬಿ ಪ್ರಕಟಿಸಿದ ಮೊತ್ತವು ಸ್ವಿಸ್ ಅಧಿಕಾರಿಗಳು ಬಹಿರಂಗಗೊಳಿಸಿದ ಅಧಿಕೃತ ಮೊತ್ತವಾಗಿದ್ದು, ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ ಹೊಂದಿದ್ದಾರೆ ಎನ್ನಲಾಗಿರುವ ಬಹುಚರ್ಚಿತ ಕಪ್ಪುಹಣವಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಎಸ್‌ಐಟಿ ರಚನೆ
ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಸ್ವಿಟ್ಜರ್‌ಲ್ಯಾಂಡ್ ಸೇರಿದಂತೆ ವಿದೇಶದಲ್ಲಿ ಜಮೆ ಮಾಡಿರುವ ಕಪ್ಪುಹಣದ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿದೆ. ಕಪ್ಪು ಹಣದ ಸಮಸ್ಯೆಯನ್ನು ನಿಯಂತ್ರಿಸಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ತನಿಖೆಯ ಬಳಿಕ ಸಾವಿರಾರು ಕೋಟಿ ರೂಪಾಯಿ ಮೊತ್ತದ ಅಕ್ರಮ ಹಣವನ್ನು ಭಾರತೀ ಯರು ವಿದೇಶದಲ್ಲಿ ಠೇವಣಿ ಇರಿಸಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಕಾನೂನು ಕ್ರಮ ಕೈಗೊಂಡಿದೆ.