ಸ್ಕಾರ್ಫ್ ವಿವಾದ: ಕಾಲೇಜು ವಿದ್ಯಾರ್ಥಿನಿಯರಿಗೆ ನೋಟಿಸ್
ಮಂಗಳೂರು, ಜೂ.28: ಸ್ಕಾರ್ಫ್ ಧರಿಸದಂತೆ ತಡೆಯೊಡ್ಡಿದ ಸಂತ ಆ್ಯಗ್ನೆಸ್ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ ಹಲವು ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲೆ ನೋಟಿಸ್ ಜಾರಿಗೊಳಿಸಿದ್ದು, ಮೂರು ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.
ಈ ಮಧ್ಯೆ ಕೆಲವು ಮುಸ್ಲಿಂ ಸಂಘಟನೆಗಳ ಮುಖಂಡರು ಗುರುವಾರ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದೆ. ಅಲ್ಲದೆ ನೋಟಿಸ್ ಜಾರಿಯಿಂದ ವಿವಾದ ತಣ್ಣಗಾಗುವ ಬದಲು ಪ್ರತಿಭಟನೆಯ ಕಾವು ಪಡೆಯುತ್ತಿದೆ. ಗುರುವಾರ ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ಸಿಎಫ್‌ಐ ಪ್ರತಿಭಟನೆ ನಡೆಸಿದೆ.
ಕಾಲೇಜಿನ ಆಡಳಿತ ಮಂಡಳಿಯು ಸ್ಕಾರ್ಫ್ ಧರಿಸದಂತೆ ಕಿರುಕುಳ ನೀಡುತ್ತದೆ ಎಂದು ಆರೋಪಿಸಿ ಕಳೆದ ಸೋಮವಾರ ಹಲವು ವಿದ್ಯಾರ್ಥಿನಿಯರು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೂಡ ಬೆಂಬಲ ವ್ಯಕ್ತಪಡಿಸಿದ್ದವು. ಮಂಗಳವಾರ ಕೂಡ ಸ್ಕಾರ್ಫ್ ಧರಿಸಿ ಹೋದ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಬದಲಾಗಿ ಪ್ರತಿಭಟನೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಯಿತು. ಈ ಮಧ್ಯೆ ಕೆಲವು ವಿದ್ಯಾರ್ಥಿನಿಯರು ಮತ್ತು ಪೋಷಕರು ಆಡಳಿತ ಮಂಡಳಿಯ ಈ ಧೋರಣೆಯನ್ನು ಖಂಡಿಸಿ ಸುದ್ದಿಗೋಷ್ಠಿಯನ್ನೂ ನಡೆಸಿ ಗಮನ ಸೆಳೆದಿದ್ದರು. ಆದರೆ ಆಡಳಿತ ಮಂಡಳಿಯು ತನ್ನ ನಿಲುವಿಗೆ ಅಂಟಿಕೊಂಡಿದೆ. ಅಲ್ಲದೆ ಬುಧವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲೆ ನೋಟಿಸ್ ಜಾರಿಗೊಳಿಸಿದೆ. ನೋಟಿಸ್ ಸ್ವೀಕರಿಸಿರುವ ವಿದ್ಯಾರ್ಥಿನಿಯರು ಮುಂದೇನು ಮಾಡಬೇಕು ಎಂದು ತಿಳಿಯದೆ ಗೊಂದಲದಲ್ಲಿದ್ದಾರೆ. ತನ್ಮಧ್ಯೆ ಶುಕ್ರವಾರ ಪೋಷಕರ ಸಭೆ ನಡೆಯುವ ಬಗ್ಗೆ ಮಾಹಿತಿ ಇದೆ.
ತರಗತಿಯೊಳಗೆ ಸ್ಕಾರ್ಫ್ ಧರಿಸಬಾರದು. ಇದು ಸಂಸ್ಥೆಯ ನಿಯಮವಾಗಿದೆ. ಇದಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲೆ ತಿಳಿಸಿದ್ದರೆ, ತರಗತಿ ಪ್ರವೇಶಕ್ಕೆ ಮುನ್ನ ಸ್ಕಾರ್ಫ್ ಹಾಕಬಾರದು ಎಂದು ತಿಳಿಸಿದ್ದರೆ ನಾವು ಈ ಕಾಲೇಜಿಗೆ ಸೇರ್ಪಡೆಗೊಳ್ಳುತ್ತಿರಲಿಲ್ಲ. ತರಗತಿ ಪ್ರವೇಶದ ಬಳಿಕ ವಾರ್ಷಿಕ ಕ್ಯಾಲೆಂಡರ್ ನೀಡಿ ಅದರಲ್ಲಿ ನಿಯಮಗಳಿವೆ ಎಂದರೆ ಹೇಗೆ ಎಂದು ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ.
ಸ್ಕಾರ್ಫ್ ಧರಿಸಿದರೆ ಒಳಗೆ ಪ್ರವೇಶವೇ ಇಲ್ಲ. ನೋಟಿಸ್ ನೀಡಿದ್ದಲ್ಲದೆ ಮೂರು ದಿನದೊಳಗೆ ಉತ್ತರಿಸದಿದ್ದರೆ ಕಾಲೇಜಿನಿಂದ ಹೊರಗೆ ಹಾಕುವೆವು, ದಂಡ ವಿಧಿಸುವೆವು, ನಡೆತ ಪತ್ರದಲ್ಲಿ ‘ಬಿ’ ರಿಪೋರ್ಟ್ ಹಾಕಲಾಗುವುದು, ಗೈರು ಹಾಜರು ಹಾಕಲಾಗುವುದು ಎಂದು ಎಚ್ಚರಿಸುತ್ತಿದ್ದಾರೆ. ಸ್ಕಾರ್ಫ್ ಹಾಕುವುದಿದ್ದರೆ ತರಗತಿಗೆ ಬರುವುದೇ ಬೇಡ ಎನ್ನುತ್ತಿದ್ದಾರೆ. ಬೆಳಗ್ಗೆ 9 ರಿಂದ ಅಪರಾಹ್ನ 3:15ರವರೆಗೆ ಗಾಳಿ-ಮಳೆಯನ್ನು ಲೆಕ್ಕಿಸದೆ ನಮ್ಮನ್ನು ತರಗತಿಯಿಂದ ಹೊರಗೆ ನಿಲ್ಲಿಸಲಾಗುತ್ತದೆ. ನಮ್ಮ ಅಳಲು ಜಿಲ್ಲಾಡಳಿತಕ್ಕೆ ಕೇಳದಿರುವುದು ವಿಪರ್ಯಾಸ ಎಂದು ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.