ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಖಂಡನಾ ಸಭೆ
ಮಂಗಳೂರು, ಜೂ.28: ನಗರದ ಪ್ರತಿಷ್ಠಿತ ಮಹಿಳಾ ವಿದ್ಯಾಸಂಸ್ಥೆಯಾದ ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಲ್ಲಿ ಸ್ಕಾರ್ಫ್ ಧರಿಸಕೂಡದು ಎಂದು ಆಡಳಿತ ಮಂಡಳಿಯು ವಿದ್ಯಾರ್ಥಿನಿಯರನ್ನು ಒತ್ತಾಯಿಸಿ ತರಗತಿ ಪ್ರವೇಶಕ್ಕೆ ನಿಷೇಧ ಹೇರಿರುವ ಕ್ರಮ ಖಂಡನೀಯ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.
ಬುಧವಾರ ನಗರದ ಸಭಾಂಗಣವೊಂದರಲ್ಲಿ ಸಭೆ ಸೇರಿದ ವಿವಿಧ ಸಂಘಟನೆಗಳ ನಾಯಕರು, ಸೈಂಟ್ ಆ್ಯಗ್ನೆಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸಿದ ಅಸಂಖ್ಯಾತ ಮುಸ್ಲಿಮ್ ವಿದ್ಯಾರ್ಥಿನಿಯರು ಇಂದು ಉತ್ತಮ ಕುಟುಂಬ ಮತ್ತು ಹುದ್ದೆಗಳಲ್ಲಿರುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯನ್ನು ಗೌರವಿಸುತ್ತೇವೆ. ಆದರೆ ವಿದ್ಯಾಸಂಸ್ಥೆಯು ಮುಸ್ಲಿಮ್ ವಿದ್ಯಾರ್ಥಿನಿಯರ ಸಾಂಪ್ರಾದಾಯಿಕ ವಸ್ತ್ರ ಕ್ರಮವಾದ ಬುರ್ಖಾ, ಸ್ಕಾರ್ಫ್ ಧರಿಸುವಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ವಿದ್ಯಾರ್ಥಿನಿಯವರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಮಾಡಿದ ಹಸ್ತಕ್ಷೇಪವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಆದುದರಿಂದ, ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಸ್ಕಾರ್ಫ್ ಬಗೆಗಿನ ನಿಲುವನ್ನು ಪುನಃ ಪರಿಶೀಲಿಸಬೇಕು. ಗೊಂದಲರಹಿತವಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕು, ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಕಾಲೇಜು ತರಗತಿಗೆ ಪ್ರವೇಶ ನೀಡಿ ವಿವಾದವನ್ನು ಕೊನೆಗೊಳಿಸಬೇಕು ಎಂದು ಸಭೆ ಆಗ್ರಹಿಸಿದೆ.
ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರಕಾರಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ವಿವಿಧ ದೌರ್ಜನ್ಯಗಳ ಬಗ್ಗೆ ಅಹವಾಲು ಸಲ್ಲಿಸಲು ಸಭೆ ನಿರ್ಧರಿಸಿದೆ.
ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಮುಸ್ತಫಾ ಸಿ.ಎಂ., ಮುಹಮ್ಮದ್ ಹನೀಫ್ ಯು., ಹಮೀದ್ ಕುದ್ರೋಳಿ, ಅಬ್ದುಲ್ ಜಲೀಲ್ ಯಾನೆ ಅದ್ದಾಕ, ಹಿದಾಯತ್ ಮಾರಿಪಟ್ಣ, ವಿ.ಎಚ್. ಕರೀಮ್, ಸಾಲಿಹ್ ಬಜ್ಪೆ, ಸಿದ್ದೀಖ್ ತಲಪಾಡಿ, ಶಾಹುಲ್ ಹಮೀದ್, ಮುಸ್ತಫಾ ಕೆಂಪಿ ಮತ್ತಿತರರು ಉಪಸ್ಥಿತರಿದ್ದರು.