ಉಳ್ಳಾಲ ಕೇಂದ್ರ ಜುಮಾ ಮಸೀದಿ ‘ಆದರ್ಶ ಮಸೀದಿ’ಯಾಗಿ ಆಯ್ಕೆ
ಮಂಗಳೂರು, ಜೂ.28: ರಾಜ್ಯ ವಕ್ಫ್ ಮಂಡಳಿಯಿಂದ, ಜಿಲ್ಲೆಯ ಆಯ್ದ ಧಾರ್ಮಿಕ ಸಂಸ್ಥೆಯಡಿ ಸರಕಾರದ ವಿವಿಧ ಯೋಜನೆ ಮತ್ತು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ದಿಗೊಳ್ಳುವಂತಹ ಕಾರ್ಯಗಳ ಬಗ್ಗೆ ಜನರಿಗೆ ತಲುಪಲು ಸಹಾಯಕವಾಗುವಂತೆ ಮಾಹಿತಿ ಕೇಂದ್ರ ಸ್ಥಾಪಿಸುವ ಯೋಜನೆಯಡಿ ದ.ಕ ಜಿಲ್ಲೆಯ ಐದು ಧಾರ್ಮಿಕ ಸಂಸ್ಥೆಯ ಪೈಕಿ ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಕಮಿಟಿಯು ಆದರ್ಶ (ಮಿಸಾಲಿ) ಮಸೀದಿಯಾಗಿ ಆಯ್ಕೆಗೊಂಡಿದೆ.
ಅದರಂತೆ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕಣಚುರು ಮೋನು 80 ಸಾವಿರ ರೂಪಾಯಿಯ ಚೆಕ್ ವಿತರಿಸಿದರು. ಈ ಸಂದರ್ಭ ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯೀಲ್, ಬಾವಾ ಮುಹಮ್ಮದ್, ಜತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ ಉಪಸ್ಥಿತರಿದ್ದರು.
ಇಬ್ರಾಹೀಂ ಹಾಜಿಯ ನಿಧನದಿಂದ ಉಳ್ಳಾಲಕ್ಕೆ ತುಂಬಲಾರದ ನಷ್ಟವಾದಾಗ ಕಣಚೂರು ಮೋನು ಅಧ್ಯಕ್ಷ ಸ್ಥಾನವನ್ನು ತುಂಬಿದ್ದಲ್ಲದೆ ಮಧ್ಯಾಹ್ನ ಗಂಜಿ ವ್ಯವಸ್ಥೆ, ಮಸೀದಿಯ ನವೀಕರಣ, ಮಸೀದಿ ನಿರ್ಮಾಣ, ಶಾಲೆ ನಿರ್ಮಾಣ, ಕಂಪ್ಯೂಟರೀಕರಣ ಸಹಿತ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದರು.
ಇದೀಗ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ರಾಜ್ಯ ವಕ್ಫ್ ಮಂಡಳಿಯ ಯೋಜನೆಗಳನ್ನು ತ್ವರಿತ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ. ಆದರ್ಶ ಮಸೀದಿಯಾಗಿ ಉಳ್ಳಾಲ ದರ್ಗಾ-ಮಸೀದಿಯನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತಸವನ್ನುಂಟು ಮಾಡಿದೆ ಎಂದು ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.