×
Ad

ಭಾರೀ ಮಳೆಗೆ ಆಗುಂಬೆ ಘಾಟಿಯ ಬದಿ ಕುಸಿತ: ಲಾರಿ ಸೇರಿ ಭಾರೀ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ

Update: 2018-06-28 21:02 IST
ಆಗುಂಬೆ ಘಾಟಿಯು ಉಡುಪಿ ಜಿಲ್ಲಾ ವ್ಯಾಪ್ತಿಯ 7ನೇ ತಿರುವಿನಲ್ಲಿ ಕುಸಿದಿರುವುದು

ಹೆಬ್ರಿ, ಜೂ.28: ಉಡುಪಿ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ರಸ್ತೆ ಬದಿ ಕುಸಿದಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ.

ಘಾಟಿಯ ಏಳನೇ ತಿರುವಿನ ರಸ್ತೆ ಪಕ್ಕದ ತಡೆಗೋಡೆ ಕೂಡ ಕುಸಿದು ಬಿದ್ದಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹೆಬ್ರಿ ಪೊಲೀಸರು ಹಾಗೂ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕನ ನಡೆಸಿ, ತುರ್ತು ಅಗತ್ಯ ಕ್ರಮಗಳನ್ನು ಕೈಗೊಂಡರು. ಪೊಲೀಸರು ಲಾರಿ, ಟಿಪ್ಪರ್ ಸಹಿತ ಘನ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಿದ್ದಾರೆ.

ಭಾರೀ ಮಳೆಯಿಂದ ರಸ್ತೆಯು ಕುಸಿಯುವ ಅಪಾಯ ಹೆಚ್ಚಿದೆ. ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ಮತ್ತವರ ತಂಡ ಸ್ಥಳದಲ್ಲಿದ್ದು ಸುಗಮ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕೈಗೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ಕುಸಿತ ಸಂಭವಿಸಿದೆ. ಕಳೆದ ಕೆಲವು ವರ್ಷದ ಹಿಂದೆ ಕೂಡ ಘಾಟಿಯ ಬದಿ ಕುಸಿದಿತ್ತು. ಘಾಟಿಯ ಬಹುತೇಕ ಕಡೆಗಳಲ್ಲಿ ಬಿದ್ದ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೇ ಹರಿದು ಹೋಗುತ್ತಿರುವ ಕಾರಣದಿಂದಾಗಿ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಭೂಕುಸಿತವಾದ ಭಾಗವು ಶೇ.80ರಷ್ಟು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಬರುತಿದ್ದು, ತಿರುವು ಹೊಂದಿರುವ ಕಡಿದಾದ ರಸ್ತೆಯ ಅಪಾಯಕಾರಿ ಸ್ಥಳವಾಗಿದೆ. ಸದ್ಯಕ್ಕೆ ಭೂ ಕುಸಿತವಾದ ಜಾಗದಲ್ಲಿ ಮರಳು ಚೀಲವನ್ನು ಇರಿಸಿದ್ದು, ಪೊಲೀಸರು ಬ್ಯಾರಿಕೇಡ್‌ಗಳನ್ನು ಇರಿಸಿದ್ದಾರೆ ಎಂದು ಕಾರ್ಕಳ ತಹಶೀಲ್ದಾರರು ತಿಳಿಸಿದ್ದಾರೆ.

ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ತೀರ್ಥಹಳ್ಳಿ ತಹಶೀಲ್ದಾರ್ ಸಹ ಭೇಟಿ ನೀಡಿದ್ದಾರೆ.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆಗಳನ್ನು ನೀಡಿದ್ದಾರೆ.

ರಾತ್ರಿ ಬಸ್ ಸಂಚಾರ ತಾತ್ಕಾಲಿಕ ರದ್ದು

ಉಡುಪಿ-ತೀರ್ಥಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ 169ಎ ಶಿವಮೊಗ್ಗ ಜಿಲ್ಲೆಯ ಗಡಿ ಪ್ರದೇಶದ ಆಗುಂಬೆ ರಸ್ತೆ 7ನೇ ತಿರುವಿನ ಬದಿಯ ಅಚ್ಚು ಸುಮಾರು 40 ಮೀ. ಉದ್ದ ಕುಸಿತಗೊಂಡಿರುವುದರಿಂದ ಭೂಕುಸಿತ ಉಂಟಾಗಿದೆ.

ಇಲ್ಲಿ ರಸ್ತೆಯು ಕಡಿದಾದ ತಿರುವು ಇರುವ ಕಾರಣ ಕಾರ್ಕಳ ತಹಶೀಲ್ದಾರ್‌ರ ಶಿಫಾರಸ್ಸಿನಂತೆ ರಸ್ತೆ ದುರಸ್ಥಿಗೊಳ್ಳುವರೆಗೆ ಅಧಿಕ ಸಾಮರ್ಥ್ಯವುಳ್ಳ ಲಾರಿ, ಟಿಪ್ಪರ್‌ಗಳ ಹಾಗೂ ರಾತ್ರಿಯ ವೇಳೆಯಲ್ಲಿ ಬಸ್ ಸಂಚಾರವನ್ನು ನಿಷೇಧಿಸಿ ಹಾಗೂ ಲಘು ವಾಹನಗಳನ್ನು (ಅಂಬುಲೆನ್ಸ್ ಸೇರಿ) ಮಾತ್ರ ಸಂಚರಿಸಲು ಅವಕಾಶ ನೀಡಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ತುರ್ತಾಗಿ ರಸ್ತೆ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳುವಂತೆ ಹಾಗೂ ಅಲ್ಲಿಯವರೆಗೆ ಎಚ್ಚರಿಕೆ ಫಲಕ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸಂಬಂಧಿತರಿಗೆ ಸೂಚನೆಗಳನ್ನು ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News