×
Ad

ಪಂಪ್‌ವೆಲ್-ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್

Update: 2018-06-28 21:15 IST

ಮಂಗಳೂರು, ಜೂ.28: ದ.ಕ. ಜಿಲ್ಲೆಯಲ್ಲಿ ಒಂಡೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಇನ್ನೊಂದೆಡೆ ದಿನವಿಡೀ ಟ್ರಾಫಿಕ್ ಜಾಮ್‌ನಿಂದಾಗಿ ಸಾರ್ವಜನಿಕರು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ಒಂದು ವಾರದಿಂದ ಪಂಪ್‌ವೆಲ್-ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸಂಜೆ 4ರ ಬಳಿಕ ರಾತ್ರಿ 9ರವರೆಗೆ ನಿರಂತರವಾಗಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಪಂಪ್‌ವೆಲ್-ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಎರಡೂ ಕಡೆ ಫ್ಲೈ ಓವರ್ ಕಾಮಗಾರಿ ಅಪೂರ್ಣವಾಗಿದೆ. ಸ್ಥಳದಲ್ಲಿ ಈಗ ಯಾವುದೇ ಕೆಲಸವೂ ನಡೆಯುತ್ತಿಲ್ಲ. ಅವೈಜ್ಞಾನಿಕ ತಿರುವುಗಳಿಂದಾಗಿ ಕಳೆದ ವಾರದಿಂದ ಈ ಸಮಸ್ಯೆ ತಲೆದೋರಿದೆ.

ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದರ ಪರಿಣಾಮ ಅರ್ಧ ಕಿಲೋಮೀಟರ್ ಇರುವ ಕಲ್ಲಾಪುವಿನಿಂದ ತೊಕ್ಕೊಟ್ಟು ಪ್ರಯಾಣ ಬರೋಬ್ಬರಿ 45 ನಿಮಿಷದ ಪ್ರಯಾಣ ಮಾಡುವ ಅಗತ್ಯತೆ ನಿರ್ಮಾಣವಾಗಿದೆ. ಕಲ್ಲಾಪು ಬಳಿ ಇತ್ತೀಚೆಗೆ ಹಠಾತ್ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದಕ್ಕೆ ಅಡ್ಡಾದಿಡ್ಡಿ ವಾಹನಗಳ ಸಾಗಾಟ, ಲಾರಿ-ಬಸ್‌ಗಳು ತಾಮುಂದು-ನಾಮುಂದು ಎಂದು ಸಾಗುತ್ತಿರುವುದು ಪ್ರಮುಖ ಕಾರಣವಾಗಿದೆ.

ನಾಗರಕಟ್ಟೆಯ ಬಳಿಯ ಮಧ್ಯ ರಸ್ತೆಯಲ್ಲಿ ಹಠಾತ್‌ಆಗಿ ಟ್ರಾಫಿಕ್ ಸಂಭವಿಸುತ್ತಿದೆ. ಸರ್ವಿಸ್ ರಸ್ತೆಯಲ್ಲೇ ಎಲ್ಲ ವಾಹನಗಳನ್ನು ಸಾಗಲು ಬಿಟ್ಟರೆ ಸಾಲು ಪ್ರಕಾರ ಸಾಗಲು ಅನುಕೂಲಕರವಾಗಲಿದೆ. ಈ ನಿಟ್ಟಿನಲ್ಲಿ ನಾಗರ ಕಟ್ಟೆ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರೆ ತಕ್ಕ ಮಟ್ಟಿಗೆ ಟ್ರಾಫಿಕ್ ನಿಯಂತ್ರಣ ಆಗಬಹುದು. ಈ ನಿಟ್ಟಿನಲ್ಲಿ ಪೊಲೀಸರ ಸೇವೆ ಅಗತ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News