ಇಬ್ಬರು ಬಾಲಕಿಯರ ಮೃತದೇಹ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಬೆಗುಸರಾಯಿ (ಬಿಹಾರ), ಜೂ.28: ಬಿಹಾರದ ಬೆಗುಸರಾಯಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಮಕ್ಕಳ ಮೃತದೇಹವು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಮೃತ ಹೆಣ್ಮಕ್ಕಳು ಕೊಡವಂಡ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೋನಾಪುರ ತೊಲ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕಿಯರಲ್ಲಿ ಒಬ್ಬಳ ವಯಸ್ಸು 14 ವರ್ಷವಾಗಿದ್ದರೆ ಇನ್ನೊರ್ವಳು ಹದಿನೈದು ವರ್ಷ ಪ್ರಾಯದವಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಅವರನ್ನು ಹತ್ಯೆಗೈದು ಮರಕ್ಕೆ ನೇತು ಹಾಕಲಾಗದಿಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ನಾಪತ್ತೆಯಾಗಿದ್ದ ಬಾಲಕಿಯರನ್ನು ಅವರ ಮನೆಯವರು ಹುಡುಕಾಡಿದಾಗ ಅವರ ಮೃತದೇಹಗಳು ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ಬಾಲಕಿಯರ ಪೈಕಿ ಓರ್ವಳು ಸ್ಥಳೀಯ ಶಾಲೆಯಲ್ಲಿ ಕಲಿಯುತ್ತಿದ್ದರೆ ಇನ್ನೊರ್ವಳು ದಿಲ್ಲಿಯಲ್ಲಿ ಶಿಕ್ಷಣ ಪಡೆಯುತ್ತಿದ್ದು ರಜೆಯ ನಿಮಿತ್ತ ಊರಿಗೆ ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.