ಸ್ವತಂತ್ರ ಫೆಲೆಸ್ತೀನ್‌ಗೆ ಮರಳಿ ಬನ್ನಿ: ರಾಜಕುಮಾರ ವಿಲಿಯಮ್‌ಗೆ ಅಬ್ಬಾಸ್ ಆಹ್ವಾನ
ಅಮ್ಮಾನ್, ಜೂ. 28: ಬ್ರಿಟನ್ ರಾಜಕುಮಾರ ವಿಲಿಯಮ್ ಬುಧವಾರ ಫೆಲೆಸ್ತೀನ್‌ಗೆ ಭೇಟಿ ನೀಡಿದರು. ಈ ಅವಧಿಯಲ್ಲಿ ‘ಡ್ಯೂಕ್ ಆಫ್ ಕೇಂಬ್ರಿಜ್’ ನಿರಾಶ್ರಿತ ಶಿಬಿರವೊಂದಕ್ಕೆ ಭೇಟಿ ನೀಡಿದರು, ಸಂಗೀತ ಕಾರಂಜಿಯೊಂದನ್ನು ಉದ್ಘಾಟಿಸಿದರು ಹಾಗೂ ಫೆಲೆಸ್ತೀನಿ ಸಂಗಿತ ಮತ್ತು ಆಹಾರವನ್ನು ಆನಂದಿಸಿದರು.
ಬ್ರಿಟನ್ ರಾಜಕುಮಾರನನ್ನು ಸ್ವಾಗತಿಸಿದ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್, ಇಸ್ರೇಲ್ ಜೊತೆಗಿನ ಶಾಶ್ವತ ಶಾಂತಿಗೆ ತನ್ನ ದೇಶ ಬದ್ಧವಾಗಿದೆ ಎಂದು ಹೇಳಿದರು. ‘‘ನಾವು ಸಂಧಾನದ ಮೂಲಕ ಶಾಂತಿ ಸ್ಥಾಪಿಸಲು ಬಯಸುತ್ತೇವೆ. ಇದು ನಮ್ಮ ನಿಲುವಾಗಿದೆ ಹಾಗೂ ಅದು ಸುದೀರ್ಘ ಅವಧಿಯಲ್ಲಿ ಬದಲಾಗಿಲ್ಲ’’ ಎಂದು ಅವರು ರಾಜಕುಮಾರ ವಿಲಿಯಮ್‌ಗೆ ಹೇಳಿದರು. ರಮಲ್ಲಾದಲ್ಲಿರುವ ಅಧ್ಯಕ್ಷೀಯ ಕಚೇರಿಯಲ್ಲಿ ಅಬ್ಬಾಸ್ ಬ್ರಿಟನ್ ರಾಜಕುಮಾರನ ಜೊತೆ ಚರ್ಚಿಸಿದರು.
‘‘ನಿಮ್ಮ ಮುಂದಿನ ಭೇಟಿಯು ಪೂರ್ಣ ಪ್ರಮಾಣದ ಸ್ವಾತಂತ್ರ ಹೊಂದಿರುವ ಸ್ವತಂತ್ರ ಫೆಲೆಸ್ತೀನ್‌ಗೆ ಆಗಿರುತ್ತದೆ ಎಂದು ನಾನು ಆಶಿಸುತ್ತೇನೆ’’ ಎಂದು ಅಬ್ಬಾಸ್ ನುಡಿದರು. ‘‘ನಮ್ಮ ನ್ಯಾಯಯುತ ಫೆಲೆಸ್ತೀನ್ ದೇಶದ ಬೇಡಿಕೆಗೆ ನಮಗೆ ಯಾವತ್ತೂ ಬ್ರಿಟಿಶ್ ಜನತೆಯ ಬೆಂಬಲದ ಅಗತ್ಯವಿದೆ’’ ಎಂದರು.