ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ; ಅಲ್ಲಲ್ಲಿ ಹಾನಿ, ಕೃತಕ ನೆರೆ
ಉಡುಪಿ, ಜೂ.28: ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿಯುತಿದ್ದು, ಹೆಚ್ಚಿನ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ. ಇನ್ನೂ ಹಲವು ಕಡೆಗಳಲ್ಲಿ ನೀರು ಸರಿಯಾಗಿ ಹರಿದು ಹೋಗಲು ಅವಕಾಶವಿಲ್ಲದೇ ಕೃತಕ ನೆರೆ ಕಾಣಿಸಿಕೊಂಡಿದ್ದು, ಕೃಷಿ ಪ್ರದೇಶ ಹಾಗೂ ಮನೆಗಳು ನೀರಿನಿಂದ ಆವೃತ್ತವಾಗಿವೆ.
ಕುಂದಾಪುರ ತಾಲೂಕಿನ ಪಡುಕೋಣೆ ಗ್ರಾಮದಲ್ಲಿ ನೆರೆ ನೀರಿನಿಂದ ಕೃಷಿ ಭೂಮಿ, ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಅಲ್ಲದೇ ಮರವಂತೆ- ಪಡುಕೋಣೆ ಸಂಪರ್ಕ ರಸ್ತೆಯ ಮೇಲೆ ನೀರು ಹರಿಯುತಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕಳೆದ ಮೂರು ದಿನಗಳ ಭಾರೀ ಮಳೆಯಿಂದ ಸುರಿಯುತಿದ್ದು, ಗಾಳಿ- ಮಳೆಗೆ ಜಿಲ್ಲೆಯ 20ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಇಂದು ಅಪರಾಹ್ನ 3:30ರ ಸುಮಾರಿಗೆ ಬೈಂದೂರು ತಾಲೂಕು ನಾವುಂದ ಗ್ರಾಮದ ಕುದ್ರುಕೊಡೆ ದೊಡ್ಮನೆಯ ರುದ್ರಮ್ಮ ಶೆಟ್ಟಿ ಅವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು 50,000 ರೂ.ನಷ್ಟ ಸಂಭವಿಸಿದೆ.
ಮುಧೂರು ಗ್ರಾಮದ ಮಂಜು ಎಂಬವರ ಮನೆಗೆ ಭಾಗಶ: ಹಾನಿಯಾಗಿ 15,000 ರೂ., ಉಪ್ಪುಂದ ಜನತಾ ಕಾಲನಿಯ ಕಾಣಿ ದುರ್ಗಿ ಎಂಬವರ ಕಚ್ಚಾ ಮನೆಗೆ ಸಂಪೂರ್ಣ ಹಾನಿಯಾಗಿ 25,000ರೂ.ನಷ್ಟ ಉಂಟಾಗಿದೆ. ಬ್ರಹ್ಮಾವರ ತಾಲೂಕು ಜನ್ನಾಡಿಯ ಮಹಾಲಿಂಗ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು 40,000ರೂ., ಶಿರಿಯಾರದ ಸಂಜೀವ ಶೆಟ್ಟಿ ಅವರ ಮನೆ-ಕೊಟ್ಟಿಗೆ ಮೇಲೆ ಮರ ಬಿದ್ದು 20,000ರೂ.ನಷ್ಟ ಉಂಟಾಗಿದೆ.
ಉಡುಪಿ ತಾಲೂಕು ಕಡೆಕಾರು ಗ್ರಾಮದ ಜಯ ಪೂಜಾರಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು 20,000ರೂ., ಪುಂಡರಿಕಾಕ್ಷ ಭಟ್ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು 15,000ರೂ. ಉದ್ಯಾವರ ಗ್ರಾಮದ ಸುಧಾಕರ ಕೋಟ್ಯಾನ್ ಮನೆಯ ಮೇಲೆ ತೆಂಗಿನಮರ ಬಿದ್ದು 40,000ರೂ., ಸರೋಜಿ ಅವರ ಮನೆಯ ಗೋಡೆ ಕುಸಿದು 40,000ರೂ.ನಷ್ಟವಾಗಿದೆ.
ಕಾರ್ಕಳ ತಾಲೂಕು ಬೆಳಿಂಜೆ ಗ್ರಾಮದ ಅಪ್ಪು ಶೆಟ್ಟಿ ಹೊಸಮನೆ ಇವರ ವಾಸ್ತವ್ಯದ ಪಕ್ಕಾ ಮನೆಯ ಆವರಣಗೋಡೆ ಕುಸಿದು ಪಕ್ಕದ ತೋಡಿಗೆ ಬಿದ್ದಿದ್ದು, ಇದರಿಂದ ಗೋಡೆಯ ಪಕ್ಕದಲ್ಲಿದ್ದ 200 ಅಡಿಕೆ ಮರಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅದೇ ಗ್ರಾಮದ ರತ್ನ ಎಂಬವರ ಹಟ್ಟಿ, ಕೊಟ್ಟಿಗೆ ಹಾಗೂ ಶೌಚಾಲಯದ ಮೇಲೆ ಮರ ಬಿದ್ದು 10,000ರೂ.ನಷ್ಟವಾಗಿದೆ. ರಾತ್ರಿ ಕುಕ್ಕಂದೂರು ಗ್ರಾಮದ ಮುತ್ತು ಎಂಬವರ ಮನೆಗೆ ಮಳೆಯಿಂದ ಭಾಗಶ: ಹಾನಿಯಾಗಿ 10,000ರೂ.ನಷ್ಟವಾಗಿದೆ.
ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುರಳೀಧರ ಮೊಗವೀರ ಎಂಬವರ ಮನೆ-ಗೋಡೆ ಕುಸಿದು 30,000ರೂ., 76 ಹಾಲಾಡಿ ಗ್ರಾಮದ ರಾಮ ನಾಯ್ಕ ಎಂಬವರ ಮನೆ ಶೌಚಾಲಯದ ಮೇಲೆ ಮರ ಬಿದ್ದು 50,000ರೂ. ಹೆಮ್ಮಾಡಿ ಗ್ರಾಮದ ಮಂಜು ಪೂಜಾರಿ ಅವರ ಮನೆಗೆ ಭಾಗಶ: ಹಾನಿ 25,000ರೂ., ಕೋಟೇಶ್ವರದ ರಜಿಯಾ ಅವರ ಮನೆಯ ಗೋಡೆ ಗಾಳಿ-ಮಳೆಗೆ ಕುಸಿದು 50,000ರೂ.ನಷ್ಟ ಉಂಟಾಗಿದೆ.