ಅಟಲ್ ಜನಸ್ನೇಹಿ ಕೇಂದ್ರವನ್ನು ಬಿ.ಸಿ.ರೋಡಿನ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ
ಬಂಟ್ವಾಳ, ಜೂ. 28: ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಎದುರು ಹಳೇ ರಂಗಮಂದಿರ ಕಟ್ಟಡದಲ್ಲಿದ್ದ ಅಟಲ್ ಜನಸ್ನೇಹಿ ಕೇಂದ್ರವನ್ನು ಗುರುವಾರ ಇಲ್ಲಿನ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಯಿತು.
ಇಲ್ಲಿ ಪಹಣಿ ಭೂಮಿ ಅರ್ಜಿ, ಜಾತಿ ಆದಾಯ ಪಿಂಚಣಿ, ಆಧಾರ್ ಕಾರ್ಡ್ ಗಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ನಾದುರಸ್ತಿಯಲ್ಲಿರುವ ಈ ಕಟ್ಟಡದಲ್ಲಿ ಕಾರ್ಯಾಚರಿಸಲು ಸಮಸ್ಯೆ ಎದುರಾಗಿತ್ತು. ಆಧಾರ್ ಕಾರ್ಡ್‌ಗಾಗಿ ಇದೇ ಕೇಂದ್ರದ ಎದುರು ಸರತಿ ಸಾಲಿನಲ್ಲಿ ಜನರು ನಿಲ್ಲುತ್ತಿದ್ದರು. ಕಳೆದ ವರ್ಷ ಅಕ್ಟೋಬರ್ 22ರಂದು ಮಿನಿ ವಿಧಾನಸೌಧ ಉದ್ಘಾಟನೆಗೊಂಡಿದ್ದರೂ ಅದರ ಎದುರು ಇದ್ದ ಈ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿದ್ದ ಜನಸೌಲಭ್ಯದ ವ್ಯವಸ್ಥೆಗಳು ಸ್ಥಳಾಂತರಗೊಂಡಿರಲಿಲ್ಲ. ಈ ಬಗ್ಗೆ ಶಾಸಕ ರಾಜೇಶ್ ನಾಯ್ಕೆ ಅವರು ಜಿಲ್ಲಾಧಿಕಾರಿಯೊಂದಿಗೆ ನೇರವಾಗಿ ಸಂಪರ್ಕಿಸಿ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ಜನಸ್ನೇಹಿ ಕೇಂದ್ರವನ್ನು ಮಿನಿವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.