ಭಾರತದ ಜೊತೆಗಿನ ಸಭೆ ರದ್ದಿಗೆ ಭಿನ್ನಾಭಿಪ್ರಾಯ ಕಾರಣವಲ್ಲ: ಅಮೆರಿಕ
ವಾಶಿಂಗ್ಟನ್, ಜೂ. 28: ಭಾರತ ಮತ್ತು ಅಮೆರಿಕಗಳ ವಿದೇಶ ಮತ್ತು ರಕ್ಷಣಾ ಸಚಿವರ ನಡುವಿನ ಸಭೆಯನ್ನು ಮುಂದೂಡಿರುವುದಕ್ಕೆ ವಿಶೇಷ ಅರ್ಥಗಳಿಲ್ಲ ಎಂದು ಅಮೆರಿಕ ಬುಧವಾರ ಹೇಳಿದೆ. ವ್ಯಾಪಾರ, ದಿಗ್ಬಂಧನಗಳು ಅಥವಾ ನೀತಿ ವಿಷಯಗಳಿಗೂ ಸಭೆ ಮುಂದೂಡಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಲಭ್ಯವಿಲ್ಲದಿರುವುದು ಸಭೆ ಮುಂದೂಡಲು ಕಾರಣವಾಗಿದೆ ಎಂದು ತಿಳಿಸಲಾಗಿದೆ. ಸಭೆ ಮುಂದೂಡಿಕೆ ದಿಢೀರನೆ ನಡೆದಿಲ್ಲ, ಎರಡೂ ದೇಶಗಳ ಅಧಿಕಾರಿಗಳಿಗೆ ಆ ಬಗ್ಗೆ ಪೂರ್ವಸೂಚನೆಯಿತ್ತು ಎನ್ನಲಾಗಿದೆ. ಪಾಂಪಿಯೊ ಈಗ ಎಲ್ಲಿದ್ದಾರೆ ಎನ್ನುವುದು ತಿಳಿದಿಲ್ಲ. ಹಾಗಾಗಿ ಅದು ಈಗ ಭಾರೀ ಊಹಾಪೋಹಗಳಿಗೆ ಕಾರಣವಾಗಿದೆ.
ಪಾಂಪಿಯೊ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಜುಲೈ 6ರಂದು ವಾಶಿಂಗ್ಟನ್‌ನಲ್ಲಿ ಭಾರತೀಯ ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿಯಾಗಬೇಕಿತ್ತು.
ಈ ಸಭೆಗೆ ಈಗಾಗಲೇ ಹಲವಾರು ವಿಘ್ನಗಳು ಎದುರಾಗಿವೆ. ವೇಳಾಪಟ್ಟಿ ಹಾಗೂ ಸಿಬ್ಬಂದಿ ಬದಲಾವಣೆ ಹಿನ್ನೆಲೆಯಲ್ಲಿ ಇದನ್ನು ಹಲವು ಬಾರಿ ಮುಂದೂಡಲಾಗಿದೆ. ಸುಶ್ಮಾ ಸ್ವರಾಜ್‌ಗೆ ಬುಧವಾರ ಕರೆ ಮಾಡಿದ ಪಾಂಪಿಯೊ, ಅನಿವಾರ್ಯ ಕಾರಣಗಳಿಂದಾಗಿ ತನಗೆ ನಿಗದಿಪಡಿಸಲಾಗಿರುವ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ, ಈ ಕಾರಣಗಳೇನು ಎನ್ನುವುದನ್ನು ಇತ್ತಂಡಗಳೂ ಬಹಿರಂಗಪಡಿಸಿಲ್ಲ. ಹಲವು ವಿಷಯಗಳಿಗೆ ಸಂಬಂಧಿಸಿ ಎರಡು ದೇಶಗಳ ನಡುವಿನ ಹಲವು ಭಿನ್ನಾಭಿಪ್ರಾಯಗಳ ಪೈಕಿ ಒಂದು ಅಥವಾ ಎಲ್ಲಾ ಭಿನ್ನಾಭಿಪ್ರಾಯಗಳು ಸಭೆ ಮುಂದೂಡಿಕೆಗೆ ಕಾರಣವಾಗಿರಬಹುದು ಎಂಬ ಊಹಾಪೋಹಗಳಿಗೆ ಇದು ಕಾರಣವಾಯಿತು.
‘‘ವೇಳಾಪಟ್ಟಿ ಬದಲಾವಣೆಗೂ ವ್ಯಾಪಾರ, ದಿಗ್ಬಂಧನ ಅಥವಾ ಇತರ ಯಾವುದೇ ಧೋರಣಾ ವಿಷಯಗಳಿಗೂ ಸಂಬಂಧವಿಲ್ಲ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಹೇಳಿದ್ದಾರೆ.
ಬೆಳೆಯುತ್ತಿರುವ ಭಿನ್ನಾಭಿಪ್ರಾಯ
ಟ್ರಂಪ್‌ರ ರಕ್ಷಣಾತ್ಮಕ ಮನೋಭಾವದ ವ್ಯಾಪಾರ ನೀತಿಗಳು ಹಾಗೂ ಇರಾನ್ ಮತ್ತು ರಶ್ಯ ವಿರುದ್ಧ ತಾನು ವಿಧಿಸಿರುವ ‘ಏಕಪಕ್ಷೀಯ’ ಆರ್ಥಿಕ ದಿಗ್ಬಂಧನಗಳನ್ನು ಜಗತ್ತಿನ ಇತರ ದೇಶಗಳೂ ಪಾಲಿಸಬೇಕು ಎಂಬುದಾಗಿ ಅಮೆರಿಕ ಒತ್ತಾಯಿಸುತ್ತಿರುವುದು ಅಮೆರಿಕ ಮತ್ತು ಭಾರತಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವುದನ್ನು ಸ್ಮರಿಸಬಹುದಾಗಿದೆ.
ರಶ್ಯ ಮತ್ತು ಇರಾನ್‌ಗಳೊಂದಿಗೆ ಭಾರತ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಈ ದೇಶಗಳೊಂದಿಗಿನ ಸಂಬಂಧವನ್ನು ಕಡಿಮೆಗೊಳಿಸಿ ಅಥವಾ ಸಂಪೂರ್ಣ ಕಡಿದು ಹಾಕಿ ಎಂಬುದಾಗಿ ಅಮೆರಿಕ ಭಾರತವನ್ನು ಒತ್ತಾಯಿಸುತ್ತಿದೆ.
ಅದೂ ಅಲ್ಲದೆ, ಇರಾನ್ ಕಚ್ಚಾ ತೈಲ ಗ್ರಾಹಕರಾದ ಭಾರತ ಮತ್ತು ಚೀನಾಗಳು ನವೆಂಬರ್ 4ರ ವೇಳೆಗೆ ಆ ದೇಶದಿಂದ ಮಾಡಿಕೊಳ್ಳುವ ತೈಲ ಆಮದನ್ನು ಶೂನ್ಯಕ್ಕೆ ಇಳಿಸಬೇಕು ಎಂಬುದಾಗಿಯೂ ಅಮೆರಿಕ ತಾಕೀತು ಮಾಡಿದೆ.
ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ದಿಗ್ಬಂಧನಗಳು ನವೆಂಬರ್ 4ರಿಂದ ಜಾರಿಗೆ ಬರುತ್ತದೆ. ಅಮೆರಿಕದ ಈ ವರ್ತನೆಯು ಭಾರತದ ಸಾರ್ವಭೌಮತೆಯನ್ನು ಉಲ್ಲಂಘಿಸುತ್ತಿದ್ದು, ಭಾರತಕ್ಕೆ ಕಿರಿಕಿರಿಯಾಗಿದೆ.