ಗುಹೆಯಲ್ಲಿ ಸಿಕ್ಕಿಕೊಂಡವರ ರಕ್ಷಣೆಗೆ ಅಮೆರಿಕ, ಬ್ರಿಟಿಶ್ ಮುಳುಗುಗಾರರು
ಮೇ ಸಾಯ್ (ಥಾಯ್ಲೆಂಡ್), ಜೂ. 28: 12 ಮಕ್ಕಳು ಮತ್ತು ಅವರ ಫುಟ್ಬಾಲ್ ಕೋಚ್ ಸಿಕ್ಕಿಹಾಕಿಕೊಂಡಿರುವ ಉತ್ತರ ಥಾಯ್ಲೆಂಡ್‌ನ ಪ್ರವಾಹಪೀಡಿತ ಗುಹೆಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಗಳಲ್ಲಿ ಅಮೆರಿಕ ಸೇನಾ ಸಿಬ್ಬಂದಿ ಮತ್ತು ಬ್ರಿಟಿಶ್ ಮುಳುಗುಗಾರರು ಕೈಜೋಡಿಸಿದ್ದಾರೆ.
ಮಕ್ಕಳು ಮತ್ತು ಅವರ ಕೋಚ್ ಐದು ದಿನಗಳಿಂದ ಪ್ರವಾಹದ ನೀರಿನಿಂದ ತುಂಬಿರುವ ಗುಹೆಯಲ್ಲಿ ಸಿಲುಕಿದ್ದಾರೆ. ಬುಧವಾರ ರಾತ್ರಿ ಮತ್ತೆ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಗಳಿಗೆ ತಡೆಯುಂಟಾಗಿದೆ.
ಚಿಯಾಂಗ್ ರೈ ಪ್ರಾಂತದ ತಾಮ್ ಲುವಾಂಗ್ ಗುಹೆಯ ಎರಡನೇ ಆವರಣದೊಳಗೂ ನೆರೆ ನೀರು ಪ್ರವೇಶಿಸಿದ ಬಳಿಕ, ಕೆಲವು ರಕ್ಷಣಾ ಮುಳುಗುಗಾರರು ಹಿಂದಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
11 ಮತ್ತು 16 ವರ್ಷಗಳ ನಡುವಿನ ಪ್ರಾಯದ ಮಕ್ಕಳು ಶನಿವಾರ ಈ ಗುಹೆಗೆ ಹೋಗಿದ್ದರು. ಭಾರೀ ಮಳೆಯಿಂದಾಗಿ ಪ್ರಧಾನ ದ್ವಾರ ನೀರಿನಿಂದಾವೃತಗೊಂಡ ಹಿನ್ನೆಲೆಯಲ್ಲಿ ಅವರು ಗುಹೆಯ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಸುಮಾರು 1,000 ನೌಕಾಪಡೆ ಯೋಧರು, ಸೈನಿಕರು, ಗಡಿ ಸೈನಿಕರು ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.