ತುರ್ತು ಪರಿಸ್ಥಿತಿ ಹೇರಿದವರು, ಅದನ್ನು ವಿರೋಧಿಸಿದವರು ಅಧಿಕಾರಕ್ಕಾಗಿ ಒಂದಾಗಿದ್ದಾರೆ:ಪ್ರಧಾನಿ

Update: 2018-06-28 16:50 GMT

ಲಕ್ನೋ, ಜೂ.28: ಪ್ರತಿಪಕ್ಷಗಳು ಕೇವಲ ಅಧಿಕಾರವನ್ನು ಕಿತ್ತುಕೊಳ್ಳಲು ಪರಸ್ಪರ ಕೈಜೋಡಿಸಿವೆ ಎಂದು ಗುರುವಾರ ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಅವುಗಳಿಗೆ ಶಾಂತಿ ಮತ್ತು ದೇಶದ ಪ್ರಗತಿ ಬೇಕಾಗಿಲ್ಲ,ಆದರೆ ರಾಜಕೀಯ ಲಾಭ ಗಳಿಸಲು ಅಶಾಂತಿ ಬೇಕಾಗಿದೆ ಎಂದು ಹೇಳಿದರು.

‘ಸಮಾಜವಾದ’ ಮತ್ತ ‘ಬಹುಜನ’ ಕುರಿತು ಮಾತನಾಡುವವರಲ್ಲಿ ಅಧಿಕಾರ ಲಾಲಸೆಯನ್ನು ನೀವು ನೋಡಬಹುದು.ಅವರಿಗೆ ಸಮಾಜದ ಅಭಿವೃದ್ಧಿ ಬೇಕಾಗಿಲ್ಲ,ಅವರಿಗೆ ಬೇಕಾಗಿರುವುದು ತಮ್ಮ ಮತ್ತು ತಮ್ಮ ಕುಟುಂಬಗಳ ಅಭಿವೃದ್ಧಿ ಮಾತ್ರ ಎಂದು ಎಸ್‌ಪಿ ಮತ್ತು ಬಿಎಸ್‌ಪಿಗಳನ್ನು ಪ್ರಸ್ತಾಪಿಸುತ್ತ ಮೋದಿ ಟೀಕಿಸಿದರು.

ತುರ್ತು ಪರಿಸ್ಥಿತಿಯನ್ನು ಹೇರಿದವರು ಮತ್ತು ಅದನ್ನು ವಿರೋಧಿಸಿದವರು ಅಧಿಕಾರ ದಾಹದಿಂದ ಇಂದು ಒಂದಾಗಿದ್ದಾರೆ. ಆದರೆ ಈ ಜನರಿಗೆ ತಳಮಟ್ಟದ ವಾಸ್ತವಗಳ ಅರಿವಿಲ್ಲ ಮತ್ತು ಸಂತ ಕಬೀರ,ಮಹಾತ್ಮಾ ಗಾಂಧಿ ಮತ್ತು ಬಾಬಾ ಅಂಬೇಡ್ಕರ್ ಅವರ ಈ ದೇಶದ ಸ್ವರೂಪದ ಬಗ್ಗೆ ಗೊತ್ತಿಲ್ಲ ಎಂದು ಉತ್ತರ ಪ್ರದೇಶದ ಮಗಹರ್‌ನಲ್ಲಿ ಸಂತ ಕಬೀರರ 500ನೇ ಪುಣ್ಯತಿಥಿಯ ಸಂದರ್ಭ ಅವರಿಗೆ ಗೌರವಗಳನ್ನು ಸಲ್ಲಿಸಿ ಮಾತನಾಡಿದ ಮೋದಿ ಹೇಳಿದರು.

ತ್ರಿವಳಿ ತಲಾಖ್ ವಿಷಯವನ್ನೂ ಪ್ರಸ್ತಾಪಿಸಿದ ಅವರು,ಮುಸ್ಲಿಂ ಮಹಿಳೆಯರಿಗೆ ಸಮಾನತೆಯನ್ನು ಒದಗಿಸಲು ತನ್ನ ಸರಕಾರವು ಈ ಹೆಜ್ಜೆಯನ್ನಿರಿಸಿತ್ತು. ಆದರೆ ಕೆಲವು ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಅಡ್ಡಿಯನ್ನುಂಟು ಮಾಡುತ್ತಿವೆ ಎಂದರು. ಇಂತಹ ರಾಜಕೀಯ ಪಕ್ಷಗಳಿಗೆ ಮುಸ್ಲಿಂ ಸಮುದಾಯದ ಮಹಿಳೆಯರ ಏಳಿಗೆಯ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದರು.

ಮಗಹರ್‌ನಲ್ಲಿ 15ನೇ ಶತಮಾನದ ಸಂತಕವಿಯ ‘ಮಝರ್’ಗೆ ಚಾದರ್ ಅರ್ಪಿಸಿದ ಮೋದಿ ನಂತರ 24 ಕೋ.ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಬೀರ ಅಕಾಡಮಿಗೆ ಶಿಲಾನ್ಯಾಸವನ್ನು ನೆರವೇರಿಸಿದರು.

ಧೂಳಿನಿಂದ ಎದ್ದು ಬಂದಿದ್ದ ಕಬೀರರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಅವರು ಸದಾ ಸಮಾನತೆ ಮತ್ತು ಎಲ್ಲ ವರ್ಗಗಳ ಏಳಿಗೆಯನ್ನು ಬೋಧಿಸಿದ್ದರು ಮತ್ತು ತನ್ನ ಸರಕಾರವು ಅವರ ಮಾರ್ಗದಲ್ಲಿಯೇ ನಡೆಯುತ್ತಿದೆ ಎಂದ ಅವರು,ತನ್ನ ಸರಕಾರವು ಬಡವರು,ದಲಿತರ,ದುರ್ಬಲ ವರ್ಗಗಳು ಮತ್ತು ಶೋಷಿತರಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ. ಐದು ಕೋಟಿ ಜನರಿಗಾಗಿ ಬ್ಯಾಂಕ್ ಖಾತೆಗಳು ತೆರೆಯಲ್ಪಟ್ಟಿವೆ,1.25 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಒಂದು ಕೋಟಿ ಜನರನ್ನು ವಿಮಾ ರಕ್ಷಣೆಯ ವ್ಯಾಪ್ತಿಗೊಳಪಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News