ಹೊಳೆಗೆ ಬಿದ್ದು ಮಹಿಳೆ ಮೃತ್ಯು
ಕೋಟ, ಜೂ.27: ಜಾನುವಾರುಗಳಿಗೆ ಹಸಿ ಹುಲ್ಲು ತರಲೆಂದು ಗದ್ದೆಗೆ ಹೋಗಿದ್ದ ಮಹಿಳೆಯೊಬ್ಬರು ಗದ್ದೆಯ ಪಕ್ಕದ ಹೊಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತ ಪಟ್ಟ ಘಟನೆ ಮಣೂರು ಗ್ರಾಮದ ಕಂಬಳಗದ್ದೆ ಬೆಟ್ಟು ಎಂಬಲ್ಲಿಂದ ವರದಿಯಾಗಿದೆ.
ಇಲ್ಲಿನ ಜಡ್ಡಿನ ಮನೆಯ ವೀರಪ್ಪ ತೋಳಾರ್ ಎಂಬವರ ಪತ್ನಿ ಸಾಕು ಮರಕಾಲ್ತಿ (57) ಮೃತ ಮಹಿಳೆ. ಇವರು ಬುಧವಾರ ಅಪರಾಹ್ನ 2:30ಕ್ಕೆ ಮನೆಯ ದನ-ಕರುಗಳಿಗೆಂದು ಹಸಿ ಹುಲ್ಲು ತರಲು ಗದ್ದೆಗೆ ಹೋಗಿದ್ದು, ಸಂಜೆಯಾದರೂ ವಾಪಾಸು ಬಂದಿರಲಿಲ್ಲ. ಮನೆಯವರು ಹುಡುಕಾಡಿದಾಗ ಗದ್ದೆ ಪಕ್ಕದ ಹೊಳೆ ಸಾಲಿನ ದಡದ ಮೇಲೆ ಅವರು ಕೊಂಡುಹೋದ ಬುಟ್ಟಿ ಪತ್ತೆಯಾಗಿತ್ತು.
ಇದರಿಂದ ಹೊಳೆ ಸಾಲು ಹಾಗೂ ಗದ್ದೆಯ ಬದಿಯಲ್ಲಿ ಮನೆಯವರು ಹುಡುಕಾಡಿದಾಗ ಇಂದು ಬೆಳಗ್ಗೆ ಮಣೂರು ಗ್ರಾಮದ ಉಪ್ಪುನೀರು ಜೆಡ್ಡು ಎಂಬಲ್ಲಿ ಹೊಳೆಯ ಪೊದೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಯಿತು. ಹೊಳೆಯ ದಡದ ನೆರೆಯಲ್ಲಿ ಅಕಸ್ಮಿಕವಾಗಿ ಕಾಲುಜಾರಿ ನದಿ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.