×
Ad

'ಇತಿಹಾಸದಲ್ಲಿ' ಮತ್ತೆ ಎಡವಿದ ಪ್ರಧಾನಿ ಮೋದಿ

Update: 2018-06-29 15:40 IST

ಹೊಸದಿಲ್ಲಿ, ಜೂ. 29: ಉತ್ತರ ಪ್ರದೇಶದ ಮಾಘರ್ ಎಂಬಲ್ಲಿ ಗುರುವಾರ ಆಗಮಿಸಿ ಸಂತ ಕಬೀರ್ ಅವರ 620ನೇ ಪುಣ್ಯ ತಿಥಿಯಂಗವಾಗಿ ಅವರ ಸಮಾಧಿಗೆ ತೆರಳಿ ಚಾದರ ಸಮರ್ಪಿಸಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೆ  ಇತಿಹಾಸದ ವಿಷಯ ಹೇಳುವಾಗ ಎಡವಿ ಮುಜುಗರಕ್ಕೀಡಾಗಿದ್ದಾರೆ.

‘‘ಮಹಾತ್ಮ ಕಬೀರ್ ಅವರ ಸಮಾನತೆ ಮತ್ತು ಸೌಹಾರ್ದತೆಯ ಸಂದೇಶ ಸಮಾಜಕ್ಕೆ ಶತಮಾನಗಳ ಕಾಲ ದಿಕ್ಕು ತೋರಿಸಿದೆ. ಅವರಿಗೆ ನಾನು ಗೌರವ ಸಮರ್ಪಿಸುತ್ತೇನೆ. ಸಂತ ಕಬೀರ್, ಗುರು ನಾನಕದೇವ್ ಹಾಗು ಬಾಬಾ ಗೋರಖನಾಥ್ ಇಲ್ಲಿ ಕುಳಿತು ಆಧ್ಯಾತ್ಮಿಕತೆಯ ಬಗ್ಗೆ ಚರ್ಚಿಸಿದ್ದಾರೆಂದು ಹೇಳಲಾಗುತ್ತಿದೆ’’ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಪ್ರಧಾನಿ ಮಾಡಿದ ತಪ್ಪು ಅವರ ಟೀಕಾಕಾರರ ಕಿವಿಗೆ ಬೀಳುತ್ತಿದ್ದಂತೆಯೇ ಆವರು ಮತ್ತೆ ಇತಿಹಾಸದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಮೋದಿಯನ್ನು ಟೀಕಿಸಲಾಗಿದೆ. ಮೂವರು ಆಧ್ಯಾತ್ಮಿಕ ಪುರುಷರೂ ಬೇರೆ ಬೇರೆ ಕಾಲಗಳಲ್ಲಿ ಜನಿಸಿದವರಾಗಿದ್ದರು ಎಂದು ಪ್ರಧಾನಿಗೆ ಹಲವರು ನೆನಪಿಸಿದ್ದಾರೆ.

ಬಾಬಾ ಗೋರಖನಾಥ್ 11ನೇ ಶತಮಾನದಲ್ಲಿ ಜನಿಸಿದವರಾಗಿದ್ದರೆ, 120 ವರ್ಷಗಳ ಕಾಲ ಬಾಳಿದ್ದರೆನ್ನಲಾದ ಸಂತ ಕಬೀರ್ 14ನೇ ಶತಮಾನದ ಕೊನೆಯ ಭಾಗದಲ್ಲಿ ಜನಿಸಿದ್ದರು. (1398 -1518). ಗುರುನಾನಕ್ ಅವರು 15ನೇ ಮತ್ತು 16ನೇ ಶತಮಾನದಲ್ಲಿ ಜೀವಿಸಿದ್ದರು (1469-1539).
ಗುರು ನಾನಕ್ ಮತ್ತು ಕಬೀರ್ ಭೇಟಿಯಾಗಿದ್ದಿರಬಹುದು ಎಂದು ಹೇಳಬಹುದಾದರೂ ಅವರಿಬ್ಬರೂ ಆಧ್ಯಾತ್ಮಿಕತೆ ಬಗ್ಗೆ ಮಾತನಾಡಿದ್ದರು ಎಂಬುದು ಸ್ವಲ್ಪ ಉತ್ಪ್ರೇಕ್ಷೆಯೆಂದೇ ಹೇಳಬೇಕು.

ಪ್ರಧಾನಿ ಇತಿಹಾಸದ ಬಗ್ಗೆ ತಮ್ಮ ಭಾಷಣಗಳಲ್ಲಿ ತಪ್ಪು ಹೇಳಿಕೆ ನೀಡುತ್ತಿರುವುದು ಇದು ಮೊದಲ ಬಾರಿಯಲ್ಲ. 2013ರಲ್ಲಿ ಬಿಹಾರ ಪಾಟ್ನಾದ ರ್ಯಾಲಿಯೊಂದರಲ್ಲಿ, ಬಿಹಾರದ ಶಕ್ತಿಯ ಬಗ್ಗೆ ಮಾತನಾಡುತ್ತಾ ಅಶೋಕ, ಪಾಟಲೀಪುತ್ರ, ನಲಂದ ಮತ್ತು ತಕ್ಷಶಿಲಾದ ಬಗ್ಗೆ ಹೇಳಿಕೊಂಡಿದ್ದರು, ಆದರೆ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ ಹಾಗೂ ಬಿಹಾರದಲ್ಲಿಲ್ಲ ಎಂಬುದು ಅವರ ಗಮನಕ್ಕೆ ಬಂದಿಲ್ಲ. ಅಮೆರಿಕಾದಲ್ಲಿ ತಮ್ಮ ಭಾಷಣವೊಂದರಲ್ಲಿ ಕೊನಾರ್ಕ್ ಸೂರ್ಯ ದೇವಾಲಯ 2000 ವರ್ಷ ಹಳೆಯದ್ದು ಎಂದಿದ್ದರು. ವಾಸ್ತವದಲ್ಲಿ ಆ ದೇವಳ 700 ವರ್ಷಗಳಷ್ಟು ಹಳೆಯದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News