×
Ad

ಮಂಗಳೂರು: ಫಾಝಿಲ್ಸ್ ಕ್ರಿಯೇಶನ್ಸ್ ಶುಭಾರಂಭ

Update: 2018-06-29 18:37 IST

ಮಂಗಳೂರು, ಜೂ. 29: ನಗರದ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಶುಕ್ರವಾರ ಭಾರತದ ಅತ್ಯಂತ ಕಿರಿಯ ಸಿಇಒ ಗಳಲ್ಲಿ ಓರ್ವ ಹಾಗೂ ಮಂಗಳೂರಿನ ವಿದ್ಯಾರ್ಥಿ ಹಾಗು ಯುವ ಉದ್ಯಮಿ ಮೂಸಾ ಫಾಝಿಲ್ ಅವರ ನೂತನ ಕಂಪೆನಿ ‘ಫಾಝಿಲ್ಸ್ ಕ್ರಿಯೇಶನ್ಸ್’ಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ www.fazilcreations.com ವೆಬ್‌ಸೈಟ್, ನೂತನ ಕಂಪೆನಿ ‘ಎಫ್ ಸಿ ಕಾರ್ಟ್ ಡಾಟ್ ಇನ್’(fckart.in) ಲೋಗೋ ಹಾಗೂ ಕೈಪಿಡಿ ಬಿಡುಗಡೆಗೊಳಿಸಲಾಯಿತು

ಮುಖ್ಯ ಅತಿಥಿಯಾಗಿ ಆಗಮಿಸಿದ ಯಲೆ ಲಾಕ್ಸ್‌ನ ವಿತರಕ ಕೆ. ವಿನಾಯಕ ಪ್ರಭು ಮಾತನಾಡಿ, ಗುರಿಯಿಲ್ಲದೆ ಯಾವುದೇ ವ್ಯಾಪಾರ, ವಹಿವಾಟು ನಡೆಸುವುದು ಅಸಾಧ್ಯ. ಹಾಕಿಕೊಂಡ ಗುರಿಯನ್ನು ವಿಭಿನ್ನ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಾಗ ಯಶಸ್ಸು ಲಭಿಸುತ್ತದೆ ಎಂದರು.

ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಸ್ತುವನ್ನು ಗುರುತಿಸಿಕೊಂಡು ಉತ್ಪಾದನೆ ಮಾಡಲು ಮುಂದಾಗಬೇಕು. ಬೇಡಿಕೆ ಇಲ್ಲದ್ದನ್ನು ಉತ್ಪಾದಿಸಿದರೆ ಯಾವುದೇ ಲಾಭವನ್ನು ತಂದು ಕೊಡುವುದಿಲ್ಲ. ವ್ಯಾಪಾರ ಆರಂಭಿಸುವ ಮೊದಲು ಯಾವುದೇ ಲಾಭವನ್ನು ಅಪೇಕ್ಷಿಸಬಾರದು. ಕ್ರಮೇಣ ಗ್ರಾಹಕರು ಹೆಚ್ಚಿದಂತೆ ಕಂಪೆನಿಗೆ ಲಾಭದಾಯವಾಗುತ್ತಾ ಹೋಗುತ್ತದೆ ಎಂದು ಹೇಳಿದರು.

ಜಗತ್ತಿನಲ್ಲಿ ಕುತೂಹಲದಿಂದಲೇ ಎಲ್ಲ ನಡೆಯುತ್ತಿರುವುದು. ಉತ್ಪಾದನಾ ವಸ್ತುವಿನ ಉತ್ತಮ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಪ್ರಥಮವಾಗಿ ಬೃಹತ್ ಮೊತ್ತದ ವಿಚಾರಗಳಿಂದ ದೂರ ಇರಬೇಕು. ಕಾಲಕ್ರಮೇಣ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಇಲ್ಲಿ ತಾಳ್ಮೆ ವಹಿಸುವುದು ತುಂಬ ಅಗತ್ಯವಾಗಿರುತ್ತದೆ ಎಂದರು.

ಮುಂಬೈ ಮಹಾನಗರದಲ್ಲಿ ಐಐಟಿ ಶಿಕ್ಷಣ ಪಡೆದಂತಹ ತುಂಬಾ ಜನ ಚಹಾದ ವ್ಯಾಪಾರ ಮಾಡುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ, ಬುದ್ಧಿವಂತಿಕೆಯನ್ನು ಬಳಸಿ ವ್ಯವಹಾರ ಮಾಡಿದ ಹಲವರು ಇಂದು ದಿನವೊಂದಕ್ಕೆ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಯಾವ ಕೆಲಸ ಮಾಡುತ್ತಿದ್ದೀರಿ ಎನ್ನುವುದು ಮುಖ್ಯವಲ್ಲ. ಕೆಲಸ ಮಾಡುವ ವಿಧಾನ ಮುಖ್ಯವಾಗುತ್ತದೆ ಎಂದು ಹೇಳಿದರು.

ನೂತನ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿದ ವಿಶ್ವಾಸ್ ಬಾವ ಬಿಲ್ಡರ್ಸ್‌ನ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಯಾವಾಗಲೂ ಸಣ್ಣ ಪ್ರಮಾಣದಿಂದಲೇ ವ್ಯಾಪಾರ-ವಹಿವಾಟನ್ನು ಪ್ರಾರಂಭಿಸಬೇಕು. ಜೀವನದಲ್ಲಿ ತಾಳ್ಮೆ ಎನ್ನುವುದು ಮುಖ್ಯ. ಸದಾ ಏನಾದರೂ ಕೆಲಸವನ್ನು ಮಾಡುತ್ತಲೇ ಇರಬೇಕು. ಯಾವುದನ್ನೂ ವಿಚಾರ ಮಾಡದೇ ಸುಮ್ಮನೆ ಕುಳಿತು ಸಮಯ ಹಾಳು ಮಾಡುವವನೇ ನಿಜವಾದ ಅಂಗವಿಕಲ ಎಂದು ಹೇಳಿದರು.

ಫಾಝಿಲ್ಸ್ ಕ್ರಿಯೇಶನ್ಸ್‌ನ ಸಿಇಒ ಮೂಸಾ ಫಾಝಿಲ್ ಮಾತನಾಡಿ, ಫಾಝಿಲ್ಸ್ ಕ್ರಿಯೇಶನ್ಸ್ ಡಿಜಿಟಲ್ ಡಿಸೈನ್, ವೆಬ್‌ಸೈಟ್ ಮತ್ತು ಗ್ರಾಫಿಕ್ ಡಿಸೈನ್‌ಗಳಲ್ಲಿ ಪರಿಣತಿಯನ್ನು ಪಡೆದಿದೆ. ಮಾತ್ರವಲ್ಲದೆ ಸಂಸ್ಥೆಯು ಮಲ್ಟಿ ಬ್ರಾಂಡ್‌ಗಳ ಆನ್‌ಲೈನ್ ಸ್ಟೋರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದೆ. ಫಾಝಿಲ್ಸ್ ಕ್ರಿಯೇಶನ್ಸ್ ತಂಡವು ಗ್ರಾಹಕರೊಂದಿಗೆ ಉತ್ತಮವಾದ ಸಂವಹನವನ್ನು ಹೊಂದಲಿದೆ. ವಿಭಿನ್ನ ಯೋಜನೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದರು.

ಇದರ ಜತೆಗೆ ಸಾಮಾಜಿಕ ಕಳಕಳಿಯ ಕಾರ್ಯವನ್ನೂ ಸಂಸ್ಥೆ ಮಾಡುತ್ತಿದೆ. ಪ್ರತಿ ಮಗು ಶಿಕ್ಷಣ ಪಡೆಯಬೇಕು. ಉತ್ತಮ ಬದುಕನ್ನು ಪಡೆಯುವುದು ಎಲ್ಲರ ಹಕ್ಕು ಆಗಿದೆ. ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳ ವಿತರಣೆಯನ್ನೂ ಸಂಸ್ಥೆ ಮಾಡುತ್ತಿದೆ ಎಂದು ಅವರು ಹೇಳಿದರು.

ಆಝಾದ್ ಹಾರ್ಡ್‌ವೇರ್‌ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್ ಆಝಾದ್ ‘ಎಫ್ ಸಿ ಕಾರ್ಟ್ ಡಾಟ್ ಇನ್’ ಲೋಗೋ ಅನಾವರಣಗೊಳಿಸಿದರು.
ಸಮಾರಂಭದಲ್ಲಿ ಎಕ್ಸ್‌ಪರ್ಟೈಸ್ ಇಂಡಸ್ಟ್ರೀಸ್‌ನ ಆಡಳಿತ ಪಾಲುದಾರ ಮುಹಮ್ಮದ್ ಶಾವಾಝ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News