×
Ad

ಕೋನ್‌ಗಳಿಗೆ ಹಾನಿ ಎಸಗುವ ಚಾಲಕರ ವಿರುದ್ಧ ಕ್ರಮ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

Update: 2018-06-29 19:46 IST

ಮಂಗಳೂರು, ಜೂ.29: ನಗರದ ವಿವಿಧ ಕಡೆಗಳಲ್ಲಿ ಸುಗಮ ಸಂಚಾರಕ್ಕಾಗಿ ಅಳವಡಿಸಿರುವ ಟ್ರಾಫಿಕ್ ಕೋನ್‌ಗಳಿಗೆ ಹಾನಿ ಮಾಡುವ ವಾಹನಗಳನ್ನು ವಶಪಡಿಸಿಕೊಂಡು ಅವುಗಳ ಚಾಲಕರ ವಿರುದ್ಧ ಕಾನೂನು ಕ್ರಮ ದಾಖಲಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಟ್ರಾಫಿಕ್ ಕೋನ್‌ಗಳ ಮೇಲೆ ಚಲಿಸಿದ 2 ಖಾಸಗಿ ಹಾಗೂ 3 ಕೆಎಸ್ಸಾರ್‌ಟಿಸಿ ಬಸ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಸಿಸಿ ಕ್ಯಾಮರಾ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದರು.

ಗ್ರಾಮಸಭೆಗಳು ನಡೆಯುವಾಗ ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ಒದಗಿಸಬೇಕು. ತೊಕ್ಕೊಟ್ಟುವಿನಲ್ಲಿ ವಾಹನ ದಟ್ಟಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಹಸನಬ್ಬ ಅಮ್ಮೆಂಬಳ ಒತ್ತಾಯಿಸಿದರು.

ನಗರದ ವಿವಿಧ ಕಡೆ ಬಸ್ ಬೇ ನಿರ್ಮಿಸಲಾಗಿದೆ. ಆದರೆ ಬಸ್‌ನವರು ನಡುರಸ್ತೆಯಲ್ಲೇ ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತದೆ. ಕೆಪಿಟಿ ವೃತ್ತದ ಬಳಿ ಖಾಸಗಿ ಬಸ್‌ನವರು ನಿರಂತರ ಪಾರ್ಕಿಂಗ್ ಮಾಡುತ್ತಾರೆ ಎಂದು ಮೇರಿಹಿಲ್‌ನ ಸಾರ್ವಜನಿಕರೊಬ್ಬರು ದೂರಿದರು.

ನಗರದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಪಾವತಿ ಪಾರ್ಕಿಂಗ್ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೊಟ್ಟಾರ ಚೌಕಿಯ ಸಾರ್ವಜನಿಕರೊಬ್ಬರು ಒತ್ತಾಯಿಸಿದರು. ಈಗಾಗಲೇ ಪಾರ್ಕಿಂಗ್ ಜಾಗಗಳನ್ನು ಗುರುತಿಸಿ, ಪಾಲಿಕೆ ಆಯುಕ್ತರಿಗೆ ನೀಡಲಾಗಿದೆ. ಸಭೆಯಲ್ಲಿ ಅನುಮೋದನೆಗೊಂಡ ಬಳಿಕ ಜಾರಿಗೊಳಿಸಲು ಸಾಧ್ಯ ಎಂದು ಆಯುಕ್ತರು ಪ್ರತಿಕ್ರಿಯಿಸಿದರು.

ಶಾಲಾ ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕ ಮಕ್ಕಳನ್ನು ಸಾಗಾಟ ಮಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಮುಲ್ಕಿಯ ಮಹಿಳೆಯೊಬ್ಬರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು ಶಾಲಾ ವಾಹನಗಳನ್ನು ಪರಿಶೀಲಿಸುವಂತೆ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದರು.

ಡಿಸಿಪಿ ಹನುಮಂತರಾಯ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News