ವಿದ್ಯಾರ್ಥಿಗಳು ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಿ: ಬಾಸ್ಕರ್ ಮೊಯಿಲಿ
ಕೊಣಾಜೆ, ಜೂ. 29: ಕೊಣಾಜೆಯ ಪೂರಕ ಪರಿಸರದಲ್ಲಿರುವ ಮಂಗಳೂರು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಬೆಳವಣಿಗೆಗೆ ಹಲವಾರು ಅವಕಾಶ, ಸೌಲಭ್ಯಗಳನ್ನು ತೆರೆದಿಟ್ಟಿದ್ದು ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಬಾಸ್ಕರ್ ಮೊಯಿಲಿ ಅವರು ಹೇಳಿದರು.
ಅವರು ಮಂಗಳೂರು ವಿವಿಯಲ್ಲಿ ಲಭ್ಯವಿರುವ ವಿವಿಧ ವಿಭಾಗಗಳು, ಕೋರ್ಸ್‌ಗಳು ಹಾಗೂ ವಿವಿಯಲ್ಲಿರುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಶುಕ್ರವಾರ ವಿವಿ ಕ್ಯಾಂಪಸ್‌ನಲ್ಲಿ ನಡೆದ ‘ಕ್ಯಾಂಪಸ್ ನೋಡಬನ್ನಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿವಿಯು ವಿವಿಯಲ್ಲಿರುವ ವಿವಿಧ ವಿಭಾಗಗಳ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮವನ್ನು ಸಂಘಟಿಸುತ್ತಿರುವುದು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರ್ ಕುಮಾರ್ ಸಿ.ಕೆ., ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಕಾರ್ಯಕ್ರಮಗಳು, ವ್ಯವಸ್ಥೆ, ವಿವಿಧ ವಿಭಾಗಗಳ ಕಾರ್ಯಚಟುವಟಿಕೆ ಕುರಿತು ಅಲ್ಲಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಜೊತೆಗೆ ಚರ್ಚಿಸಿ ತಮ್ಮ ಅಭಿರುಚಿಗೆ ಅನುಸಾರವಾಗಿ ವಿಭಾಗಗಳನ್ನು ಆರಿಸಲು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೋಡ ಬನ್ನಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಹಲವು ವಿಚಾರದಲ್ಲಿ ಸಂಶೋಧನೆಗಳನ್ನು ಕೈಗೊಂಡು ರಾಜ್ಯ, ದೇಶಕ್ಕೆ ಒಳ್ಳೆಯ ಹೆಸರನ್ನು ತರುವ ಪ್ರಯತ್ನಕ್ಕೆ ವಿ.ವಿ ಅವಕಾಶ ಮಾಡಿಕೊಟ್ಟಿದೆ. ದ.ಕ, ಉಡುಪಿ, ಕೊಡಗು ಜಿಲ್ಲೆ ಮೂರು ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳ ಅರಿವು ಮೂಡಿಸುವ ಕಾರ್ಯ ಆಗಿದೆ. ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಜೊತೆಗೆ ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್, ಕ್ಯಾಂಪಸ್ ನೋಡಬನ್ನಿ ಕಾರ್ಯಕ್ರಮದ ಸಂಯೋಜಕರಾದ ಪ್ರೊ.ವೈ.ನಾರಾಯಣ ಅವರು ಉಪಸ್ಥಿತರಿದ್ದರು.
ಮಂಗಳೂರು ವಿವಿ ಕುಲಸಚಿವ ಪ್ರೊ.ನಾಗೇಂದ್ರ ಪ್ರಕಾಶ್ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿವಿ ಪ್ರಾದ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.
ಮಾಹಿತಿ ಪಡೆದುಕೊಂಡ ವಿದ್ಯಾರ್ಥಿಗಳು:
ಮಂಗಳೂರು ವಿವಿಯಲ್ಲಿರುವ ವಿಜ್ಞಾನ, ಮಾನವಿಕ, ವಾಣಿಜ್ಯ ಮತ್ತು ನಿರ್ವಹಣೆ, ಶಿಕ್ಷಣ ಅಧ್ಯಯನಗಳನ್ನೊಳಗೊಂಡ 25 ಸ್ನಾತಕೋತ್ತರ ವಿಭಾಗಗಳ 40 ಸ್ನಾತಕೋತ್ತರ ಪದವಿಗಳ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಸ್ವತಃ ನೋಡಿ ಪ್ರಾಥಮಿಕ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಶುಕ್ರವಾರ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ತಮಗೆ ಆಯ್ಕೆ ಮಾಡಿಕೊಳ್ಳುವ ವಿಭಾಗ, ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದುಕೊಂಡರು.