×
Ad

ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಮೊಬೈಲ್ ಆ್ಯಪ್

Update: 2018-06-29 22:05 IST

ಹೊಸದಿಲ್ಲಿ,ಜೂ.29: ನಾಪತ್ತೆಯಾಗಿರುವ ಮತ್ತು ಪರಿತ್ಯಕ್ತ ಮಕ್ಕಳನ್ನು ಪತ್ತೆ ಹಚ್ಚಲು ಮೊಬೈಲ್ ಆ್ಯಪ್‌ವೊಂದನ್ನು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಶುಕ್ರವಾರ ಇಲ್ಲಿ ಬಿಡುಗಡೆಗೊಳಿಸಿದರು.

ಸತ್ಯಾರ್ಥಿ ನೇತೃತ್ವದ ಬಚ್ಪನ್ ಬಚಾವೋ ಆಂದೋಲನ(ಬಿಬಿಎ)ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿ ಕ್ಯಾಪ್‌ಜೆಮಿನಿ ಜಂಟಿಯಾಗಿ ಅಭಿವೃದ್ಧಿಗೊಳಿಸಿರುವ ಈ ಆ್ಯಪ್‌ನ್ನು ’ರಿಯುನೈಟ್’ಎಂದು ಹೆಸರಿಸಲಾಗಿದೆ.

ನಾಪತ್ತೆಯಾಗಿರುವ ಮಕ್ಕಳನ್ನು ಕೇವಲ ಸಂಖ್ಯೆಗಳನ್ನಾಗಿ ಪರಿಗಣಿಸಬಾರದು. ಏಕೆಂದರೆ ಅದು ಹೆತ್ತವರ ಪಾಲಿನ ದುರಂತವಾಗಿರುತ್ತದೆ,ತಮ್ಮ ಕರುಳಿನ ಕುಡಿಗಳನ್ನು ಕಳೆದುಕೊಂಡ ಬಳಿಕ ಅವರ ಬದುಕಿನ ಬಂಡಿ ಹಳಿ ತಪ್ಪಿರುತ್ತದೆ ಎಂದು ಹೇಳಿದ ಸತ್ಯಾರ್ಥಿ,ನಾಪತ್ತೆಯಾಗಿರುವ ಪ್ರತಿಯೊಂದು ಮಗುವೂ ಅದನ್ನು ಕಳೆದುಕೊಂಡ ಕುಟುಂಬದ ಆಶಯ ಮತ್ತು ಕನಸನ್ನು ಪ್ರತಿಬಿಂಬಿಸುತ್ತದೆ ಎಂದರು.

ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿರುವುದಕ್ಕಾಗಿ ಬಿಬಿಎ ಮತ್ತು ಸತ್ಯಾರ್ಥಿಯವರನ್ನು ಪ್ರಶಂಸಿಸಿದ ಪ್ರಭು,ಈ ಆ್ಯಪ್ ನಾಪತ್ತೆಯಾಗಿರುವ ಮಕ್ಕಳು ಮತ್ತು ಅವರ ಹೆತ್ತವರ ಮರುಮಿಲನಕ್ಕೆ ನೆರವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಮುಖಗಳನ್ನು ಹೋಲಿಸಿ ಫಲಿತಾಂಶಗಳನ್ನು ನೀಡುವ ಈ ಆ್ಯಪ್ ನಾಪತ್ತೆಯಾಗಿರುವ ಮಕ್ಕಳ ಭಾವಚಿತ್ರಗಳನ್ನು ದತ್ತಾಂಶ ಕೋಶದೊಂದಿಗೆ ತಾಳೆ ಹಾಕಲು ಅಮೆಝಾನ್ ವೆಬ್ ಸರ್ವಿಸಿಸ್ ಆಧಾರಿತ ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಸಿಕೊಳ್ಳಲಿದೆ. ಆ್ಯಪ್ ದಿಲ್ಲಿ ಪೊಲೀಸ್ ಇಲಾಖೆಯ ಕಳೆದು ಹೋಗಿರುವ ಮಕ್ಕಳ ದತ್ತಾಂಶ ಕೋಶದ ಸಂರ್ಕವನ್ನು ಹೊಂದಿರುತ್ತದೆ.

ಈ ಆ್ಯಪ್ ಬಹು ಉಪಯೋಗಿ ವೇದಿಕೆಯಾಗಿದ್ದು,ನಾಪತ್ತೆಯಾಗಿರುವ ಮಕ್ಕಳ ಭಾವಚಿತ್ರಗಳನ್ನು ಅಪ್ ಲೋಡ್ ಮಾಡಬಹುದಾಗಿದೆ. ಅಂತಹ ಮಕ್ಕಳ ಹೆತ್ತವರು ವಿವರಗಳನ್ನು ವರದಿ ಮಾಡಲು ಈ ಆ್ಯಪ್ ಅನುಕೂಲ ಕಲ್ಪಿಸುತ್ತದೆ.

ಭಾರತದಲ್ಲಿ ಪ್ರತಿ ವರ್ಷ ಸುಮಾರು 44,000 ಮಕ್ಕಳು ನಾಪತ್ತೆಯಾಗುತ್ತಿದ್ದು, ಕೇವಲ 11,000 ಮಕ್ಕಳನ್ನು ರಕ್ಷಿಸಲಾಗುತ್ತಿದೆ ಎಂದು ಬಿಬಿಎದ ಪ್ರತಿನಿಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News