ತಾಯಿ-ಮಕ್ಕಳ ಆಸ್ಪತ್ರೆಯ ಮೇಲೆ ಸರಕಾರದ ನಿಯಂತ್ರಣ ಅಗತ್ಯ: ಶಾಸಕ ರಘುಪತಿ ಭಟ್
ಉಡುಪಿ, ಜೂ.29: ಭಾರೀ ವಿವಾದ, ಪ್ರತಿಭಟನೆಗಳ ನಡುವೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಗೊಂಡಿರುವ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ಸರಕಾರದ ನಿಯಂತ್ರಣ ಹೆಚ್ಚಿರಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
200 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ಇದೀಗ ತಲೆ ಎತ್ತಿ ನಿಂತಿದ್ದು, ಕಾರ್ಯಾಚರಣೆಗೆ ಸಜ್ಜಾಗಿದೆ. ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ನಗರಸಭಾ ಸದಸ್ಯರೊಂದಿಗೆ ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದ ರಘುಪತಿ ಭಟ್, ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಕರ್ಯ, ಸೌಲಭ್ಯ, ತಂತ್ರಜ್ಞಾನ ಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಇವುಗಳ ಸೇವೆ ನಿಜವಾಗಿಯೂ ಬಡರೋಗಿಗಳಿಗೆ ಸಿಗುವಂತಾದರೆ ಇದರಿಂದ ಅವರಿಗೆ ಖಂಡಿತ ಪ್ರಯೋಜನವಿದೆ ಎಂದರು.
ರಾಜ್ಯ ಸರಕಾರ 2016ರಲ್ಲಿ ಕವಿ ಮುದ್ದಣ ರಸ್ತೆಯಲ್ಲಿ ನಗರಸಭೆ ಎದುರಿಗೆ ಈಗಿರುವ 70 ಹಾಸಿಗೆಗಳ ಹಾಜಿ ಅಬ್ದುಲ್ಲ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಒಟ್ಟು 4 ಎಕರೆ ಜಾಗವನ್ನು ಉಡುಪಿ ಮೂಲದ ಅನಿವಾಸಿ ಭಾರತೀಯ ಡಾ.ಬಿ.ಆರ್. ಶೆಟ್ಟಿ ಅಧ್ಯಕ್ಷರಾಗಿರುವ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೇಟ್ ಲಿ.ಗೆ 30 ವರ್ಷಗಳ ಗುತ್ತಿಗೆ ನೀಡಿದ್ದು, ಅವರೀಗ ಅಲ್ಲಿ 200 ಹಾಸಿಗೆಗಳ ಉಚಿತ ಚಿಕಿತ್ಸೆ ಲಭ್ಯವಿರುವ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದು, ಈಗ ಮಹಿಳಾ ಆಸ್ಪತ್ರೆ ಇರುವಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿಕೊಳ್ಳಲಿದ್ದಾರೆ.
ಸದುಪಯೋಗವಾಗಬೇಕು: ಬಹಳಷ್ಟು ವಿರೋಧದ ನಡುವೆಯೂ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿರುವುದರಿಂದ, ಇನ್ನು ಇದನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ‘ಇಲ್ಲಿರುವ ಸೌಲಭ್ಯಗಳೆಲ್ಲವೂ ಶ್ರೇಷ್ಠದರ್ಜೆಯದ್ದಾಗಿದೆ. ಇವುಗಳ ಲಾಭ ಬಡವರಿಗೆ ಸಂಪೂರ್ಣವಾಗಿ ಸಿಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಆದರೆ ನನ್ನ ಅಭಿಪ್ರಾಯದಂತೆ ಈಗ ಜಿಲ್ಲಾಸ್ಪತ್ರೆಯಲ್ಲಿರುವಂತೆ ಜಿಲ್ಲಾ ಸರ್ಜನ್‌ರ ಮೂಲಕ ಸರಕಾರ ಈ ಆಸ್ಪತ್ರೆಯ ಮೇಲೂ ಹೆಚ್ಚಿನ ನಿಯಂತ್ರಣ ಹೊಂದಿರಬೇಕೆಂಬುದು ನಾನು ಬಯಸುತ್ತೇನೆ ಎಂದ ರಘುಪತಿ ಭಟ್, ಇದಕ್ಕಾಗಿ ಸರಕಾರ ಮತ್ತು ಬಿ.ಆರ್.ಶೆಟ್ಟಿ ಅವರ ನಡುವೆ ಆಗಿರುವ ಒಡಂಬಡಿಕೆ ಯಲ್ಲಿ ಬದಾವಣೆಯಾದರೆ ಒಳ್ಳೆಯದು ಎಂದರು.
ಈಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಡವರಿಗೆ, ಸಾರ್ವಜನಿಕರಿಗೆ ದೊರೆಯುತ್ತಿರುವ ಎಲ್ಲಾ ಉಚಿತ ಸೇವೆ, ಚಿಕಿತ್ಸೆ ಹೊಸ ಆಸ್ಪತ್ರೆಯಲ್ಲೂ ಮುಂದು ವರಿಯುವುದನ್ನು ಖಚಿತಪಡಿಸಿಕೊಳ್ಳಲು ಅದರ ಮೇಲೆ ಸರಕಾರದ ನಿಯಂತ್ರಣ ವಿರಬೇಕು ಎಂಬುದನ್ನು ತಾನು ಪ್ರತಿಪಾದಿಸಿಕೊಂಡು ಬಂದಿದ್ದೇನೆ ಎಂದರು.
‘ಆಸ್ಪತ್ರೆಯನ್ನು ಸಂಪೂರ್ಣವಾಗಿ ನೋಡಿದ್ದೇನೆ. ಇಲ್ಲಿ ಸಿಗುವ ಸೇವೆ, ಸೌಲಭ್ಯಗಳ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಈಗಾಗಲೇ ಹೊರ ವಿಭಾಗ ಕಾರ್ಯಾರಂಭ ಮಾಡಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಒಳರೋಗಿ ವಿಭಾಗ ಹಾಗೂ ಎಲ್ಲಾ ಸೇವೆಗಳ ಆರಂಭಕ್ಕೆ ಸರಕಾರದಿಂದ ಅನುಮತಿ ಇನ್ನಷ್ಟೇ ಸಿಗಬೇಕಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ತಾನು ಪ್ರಯತ್ನಿಸುತ್ತೇನೆ. ಇಲ್ಲಿರುವ ಎಲ್ಲಾ ಸೌಲಭ್ಯಗಳ ಪ್ರಯೋಜನ ಬಡವರಿಗೆ ಸಿಗುವಂತಾಗಬೇಕು. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಶಾಸಕರೊಂದಿಗೆ ಜಿಪಂ ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ನಗರಸಭಾ ಸದಸ್ಯರಾದ ಯಶ್‌ಪಾಲ್ ಸುವರ್ಣ, ಶ್ಯಾಮಪ್ರಸಾದ್ ಕುಡ್ವ, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜಗದೀಶ್ ಶರ್ಮ, ಜಿಎಂ ಪ್ರಶಾಂತ್ ಮಲ್ಯ ಉಪಸ್ಥಿತರಿದ್ದರು.