ತಂದೆ ಗದರಿದರೆಂದು ಸಿಮೆಂಟ್ ತಿಂದ ಯುವಕ !

Update: 2018-06-29 17:27 GMT

ಕೋಲ್ಕತ್ತಾ, ಜೂ. 29: ಕ್ಷೀಣಿಸುತ್ತಿರುವ ಕಣ್ಣಿನ ಆರೋಗ್ಯ ಹಾಗೂ ತಂದೆಯ ಗದರಿಕೆಯಿಂದ ಖಿನ್ನನಾದ 20 ವರ್ಷದ ಯುವಕನೋರ್ವ ತನ್ನ ತಂದೆ ದಾಸ್ತಾನು ಇರಿಸಿದ್ದ 2 ಕೆ.ಜಿ. ಸಿಮೆಂಟ್ ಹಾಗೂ ಪ್ಲಾಸ್ಟರ್ ಅನ್ನು ತಿಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾರ್ಖಂಡ್‌ನ ಪಾಕುರ್ ಜಿಲ್ಲೆಯಲ್ಲಿ ನಡೆದಿದೆ. ಯುವಕನ ಹೊಟ್ಟೆಯಲ್ಲಿ ಗಟ್ಟಿಯಾಗಿದ್ದ ಸಿಮೆಂಟ್ ಅನ್ನು ಪಶ್ಚಿಮಬಂಗಾಳದ ಬರ್ದ್ವಾನ ವೈದ್ಯಕೀಯ ಕಾಲೇಜಿನ ವೈದ್ಯರು ಹೊರ ತೆಗೆದಿದ್ದಾರೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ. ಯುವಕ ಬೀಮಲ್ ಪಾಲ್ ಯಾವಾಗಲೂ ಫೇಸ್‌ಬುಕ್ ಹಾಗೂ ವ್ಯಾಟ್ಸ್‌ಆ್ಯಪ್‌ನಲ್ಲಿ ತಲ್ಲೀನನಾಗಿರುತ್ತಿದ್ದ. ತಂದೆ ಮೂರ್ತಿ ಮಾಡುತ್ತಿದ್ದ ಸಂದರ್ಭ ನೆರವು ನೀಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ತಂದೆ ಗದರಿದ್ದರು. ಇದರಿಂದ ಮನನೊಂದ ಪಾಲ್ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗುತ್ತಿದೆ.

 ‘‘ಒಂದು ದಿನ ನೀನು ಸಂಪೂರ್ಣವಾಗಿ ಕುರುಡನಾಗುತ್ತಿ. ಅನಂತರ ನೀನು ಬದುಕಿನಲ್ಲಿ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ’’ ಎಂದು ನನ್ನ ಪುತ್ರನಲ್ಲಿ ಆತನ ಸ್ನೇಹಿತರು ಭೀತಿ ಮೂಡಿಸಿದ್ದರು. ಬೇಸರ ಪಟ್ಟುಕೊಳ್ಳಬೇಡ ಎಂದು ಅನೇಕ ಬಾರಿ ಹೇಳಿದ್ದೆ. ನೇತ್ರ ತಜ್ಞರಲ್ಲಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದೆ’’ಎಂದು ಪಾಲ್‌ನ ತಂದೆ ಹೇಳಿದ್ದಾರೆ. ‘‘ಬುಧವಾರ ರಾತ್ರಿ ಹತಾಶೆಗೆ ಒಳಗಾದ ನನ್ನ ಪುತ್ರ ಸುಮಾರು 2 ಕೆ.ಜಿ. ಸಿಮೆಂಟ್ ಹಾಗೂ ಪ್ಲಾಸ್ಟರ್ ತಿಂದ. ಆತನ ಆರೋಗ್ಯ ಸ್ಥಿತಿ ಕ್ಷೀಣಿಸಿತು. ಕೂಡಲೇ ನಾವು ಬರ್ದ್ವಾನ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಿದೆವು.’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News